ನವದೆಹಲಿ: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕೋವಿಡ್ ಲಸಿಕೆಯನ್ನು ಮೊದಲು ದೇಶದಲ್ಲಿ ಪಡೆದವರು ಯಾರು ಎಂಬ ಕುತೂಹಲ ನಿಮ್ಮಲ್ಲೂ ಇರಬಹುದು. ಹೌದು, ದೇಶದಲ್ಲಿ ಈ ಸಂಜೀವಿನಿಯ ಮೊದಲ ಡೋಸ್ ನ್ನು ಪೌರ ಕಾರ್ಮಿಕ ಸಿಬ್ಬಂದಿಗೆ (ಕೊರೊನಾ ವಾರಿಯರ್) ಗೆ ನೀಡಲಾಗಿದೆ.
ಪೌರ ಕಾರ್ಮಿಕನಾಗಿರುವ ಮನೀಶ್ ಕುಮಾರ್ ಎಂಬುವವರಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದೇಶದ ಮೊದಲ ಕೊರೋನಾ ವೈರಸ್ ಲಸಿಕೆಯನ್ನು ನೀಡಲಾಗಿದೆ.
ಪ್ರಧಾನಿ ಮೋದಿ ಚಾಲನೆ ನೀಡಿದ ಬಳಿಕ ದೇಶದಲ್ಲಿ ಮೊದಲ ಕೊರೊನಾ ಲಸಿಕೆ ಪಡೆದ ವ್ಯಕ್ತಿಯಾಗಿ ಪೌರ ಕಾರ್ಮಿಕ ಮನೀಶ್ ಹೊರಹೊಮ್ಮಿದ್ದಾರೆ.
ಲಸಿಕೆಯನ್ನು ಮನೀಶ್ ಪಡೆಯುವ ವೇಳೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹಾಗೂ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಉಪಸ್ಥಿತರಿದ್ದರು.
ಇದೇ ವೇಳೆ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರಿಗೂ ಕೊರೋನಾ ಲಸಿಕೆಯನ್ನು ನೀಡಲಾಗಿದೆ.
ಲಸಿಕೆ ವಿತರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರವ ಸಚಿವ ಹರ್ಷವರ್ಧನ್ ಅವರು, ಇಂದು ನನಗೆ ಬಹಳ ಸಂತೋಷ ಹಾಗೂ ತೃಪ್ತಿ ತಂದಿದೆ. ಒಂದು ವರ್ಷದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಲೇ ಇದ್ದೇವೆ. ಕೊರೋನಾ ವಿರುದ್ಧ ಹೋರಾಡಲು ಈ ಲಸಿಕೆ ಸಂಜೀವಿನಿ ರೀತಿ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಭಾರತ್ ಬಯೋಟೆಕ್ ತಯಾರಿಸಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ತೋರಿಸಿದ್ದಾರೆ.