ನವದೆಹಲಿ: ದೇಶದಲ್ಲಿ ಈಗಾಗಲೇ ಎರಡು ಕೋವಿಡ್-19 ಲಸಿಕೆಗಳನ್ನು ವಿತರಣೆ ಮಾಡಲಾಗುತ್ತಿದ್ದು, ಈ ಪಟ್ಟಿಗೆ ಶೀಘ್ರವೇ ಮತ್ತೊಂದು ಲಸಿಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
ವಿದೇಶಗಳಲ್ಲಿ ಈಗಾಗಲೇ ಬಳಕೆ ಮಾಡಲಾಗುತ್ತಿರುವ ಮಾಡರ್ನಾ ಲಸಿಕೆ ಭಾರತದಲ್ಲಿ ಟಾಟಾ ಸಂಸ್ಥೆಯ ಸಹಯೋಗದಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಭಾರತದಲ್ಲಿ ಮಾಡರ್ನಾ ಲಸಿಕೆಯನ್ನು ಪೂರೈಸುವುದಕ್ಕೆ ಮಾಡರ್ನಾ ಐಎನ್ ಸಿ ಜೊತೆಗೆ ಟಾಟಾ ಮೊದಲ ಸುತ್ತಿನ ಮಾತುಕತೆಯಲ್ಲಿ ತೊಡಗಿದೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಪ್ರಕಟಿಸಿದೆ.
ಟಾಟಾ ಸಂಸ್ಥೆ ಮಾಡರ್ನಾ ಲಸಿಕೆಯ ಕ್ಲಿನಿಕಲ್ ಟ್ರಯಲ್ ಗಳನ್ನು ನಡೆಸುವುದಕ್ಕಾಗಿ ಭಾರತದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಜೊತೆ ಕೈ ಜೋಡಿಸಲಿದೆ.
ಭಾರತದಲ್ಲಿ ಈಗಾಗಲೇ ಭಾರತ್ ಬಯೋಟೆಕ್ ಅಂತಾರಾಷ್ಟ್ರೀಯ ಸಂಸ್ಥೆ ಹಾಗೂ ಆಕ್ಸ್ಫರ್ಡ್ ವಿವಿ ಹಾಗೂ ಆಸ್ಟ್ರಾಜೆನಿಕಾ ಪಿಎಲ್ ಸಿ ಸಹಯೋಗದಲ್ಲಿ ತಯಾರಾಗಿರುವ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಭಾರತ ಸರ್ಕಾರ ಜನವರಿ ತಿಂಗಳ ಪ್ರಾರಂಭದಲ್ಲಿ ಅನುಮತಿ ನೀಡಿತ್ತು.