ನವದೆಹಲಿ/ಡಾವೊಸ್: ಕೋವಿಡ್-19 ಸಾಂಕ್ರಾಮಿಕವನ್ನು ಹೊಡೆದೋಡಿಸಲು ಸಾಮೂಹಿಕವಾಗಿ ಬೃಹತ್ ಮಟ್ಟದಲ್ಲಿ ಲಸಿಕೆ ಹಾಕಲು ಅಂತಾರಾಷ್ಟ್ರೀಯ ಸಹಕಾರಕ್ಕೆ ಕರೆ ನೀಡಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟನಿಯೊ ಗುಟೆರ್ರೆಸ್, ಭಾರತ, ಬ್ರೆಜಿಲ್ ನಂತಹ ದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ತಯಾರಿಸಲು ಪರವಾನಗಿ ನೀಡಬೇಕು ಎಂದು ಹೇಳಿದ್ದಾರೆ.
ಬಡ ರಾಷ್ಟ್ರಗಳು ಸೇರಿದಂತೆ ದೇಶಗಳ ಪ್ರತಿಯೊಬ್ಬ ವ್ಯಕ್ತಿಗಳಿಗೆ ಲಸಿಕೆ ನೀಡಿ ಈ ಮಾರಕ ಕೊರೋನಾ ವೈರಸ್ ನ್ನು ಕೊನೆಗಾಣಿಸಬೇಕು. ಮಾನವೀಯತೆಯು ಪ್ರಕೃತಿಯೊಂದಿಗೆ ಯುದ್ಧದಲ್ಲಿದೆ, ಇದೀಗ ಕೊರೋನಾ ಹೊಸ ರೂಪಾಂತರಗಳು ಕಾಣಿಸಿಕೊಂಡಿದ್ದು, ಮನುಕುಲಕ್ಕೆ ಮತ್ತಷ್ಟು ಮಾರಕವಾಗಿದೆ. ಇದು ಪ್ರತಿ ವರ್ಷ ಹೊಸ ಲಸಿಕೆ ಅಗತ್ಯವಿರುವುದನ್ನು ತೋರಿಸಿಕೊಡುತ್ತಿದೆ ಎಂದಿದ್ದಾರೆ.
ವಿಶ್ವ ಆರ್ಥಿಕ ವೇದಿಕೆಯ ಆನ್ ಲೈನ್ ಡಾವೊಸ್ ಅಜೆಂಡಾ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಇಂದು ವಿಶ್ವವನ್ನು ಒಂದು ಶಬ್ದದಲ್ಲಿ ಹೇಳಬೇಕೆಂದರೆ ಸೂಕ್ಷ್ಮತೆ ಎಂದರು, ಕೋವಿಡ್-19 ಸಾಂಕ್ರಾಮಿಕ ಮತ್ತು ಭೌಗೋಳಿಕ ರಾಜಕೀಯದಲ್ಲಿ ಪರಿಸರದೊಂದಿಗಿನ ನಮ್ಮ ಸಂಬಂಧದಲ್ಲಿನ ದುರ್ಬಲತೆಯನ್ನು ನಾವು ನೋಡುತ್ತೇವೆ ಎಂದು ಪರಿಸರದೊಂದಿಗೆ ಮಾನವೀಯತೆಯ ಯುದ್ಧ ನಡೆಯುತ್ತಿದೆ ಎಂದು ಪ್ರಸ್ತಾಪಿಸಿ ಹೇಳಿದ್ದಾರೆ.