ನವದೆಹಲಿ: ಇಡೀ ದೇಶದ ನಾಗರಿಕರಿಗೆ ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುವ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷ ವರ್ಧನ್ ತಿಳಿಸಿದ್ದಾರೆ.
ಕೊರೋನಾ ಲಸಿಕೆಯನ್ನು ವಿತರಿಸುವ ಬಗ್ಗೆ ಸನ್ನದ್ಧವಾಗಿರುವ ಕ್ರಮಗಳ ಕುರಿತು ಪರಿಶೀಲಿಸಲು ಸರ್ಕಾರ ಶನಿವಾರ ದೇಶದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಡ್ರೈ ರನ್ ನ್ನು ಆರಂಭಿಸಿದ್ದು, ಇಂದು ದೆಹಲಿಯ ಜಿಟಿಬಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರು ಕೊರೋನಾ ಲಸಿಕೆಯನ್ನು ಉಚಿತವಾಗಿ ನೀಡುವ ಬಗ್ಗೆ ಪ್ರಶ್ನೆ ಮಾಡಿದರು. ಆಗ ಸಚಿವರು ಕೇವಲ ದೆಹಲಿಯಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಕೋವಿಡ್-19 ಲಸಿಕೆ ಉಚಿತವಾಗಿ ಜನತೆಗೆ ದೊರಕಲಿದೆ ಎಂದು ಜನತೆಗೆ ಆಶ್ವಾಸನೆ ನೀಡಿದರು.
ಪ್ರಸ್ತುತ ದೆಹಲಿಯಲ್ಲಿ ಕೊರೋನಾಗೆ ಔಷಧಿ ಮತ್ತು ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ.