ಪುಣೆ: ಪುಣೆಯ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ಅಭಿವೃದ್ಧಿಪಡಿಸಿರುವ 'ಕೋವಿಶೀಲ್ಡ್' ಹೆಸರಿನ ಆಕ್ಸ್‌ಫರ್ಟ್ ಕೋವಿಡ್-19 ಲಸಿಕೆಯು ಈಗಾಗಲೇ ಬೆಂಗಳೂರು, ದೆಹಲಿ ಸೇರಿದಂತೆ ದೇಶದ ವಿವಿಧ ಮಹಾನಗರಗಳಿಗೆ ತಲುಪಿದ್ದು, ಇದೊಂದು ಐತಿಹಾಸಿ ಕ್ಷಣ ಎಂದು ಎಸ್‌ಐಐ ಸಿಇಒ ಆದಾರ್ ಪೂನಾವಾಲಾ ಅವರು ಮಂಗಳವಾರ ಹೇಳಿದ್ದಾರೆ.
ಇಂದು ನಮ್ಮ ಕಾರ್ಖಾನೆಯಿಂದ ಲಸಿಕೆ ರವಾನೆಯಾಗುತ್ತಿರುವುದು ಐತಿಹಾಸಿಕ ಕ್ಷಣ. ದೇಶದ ಎಲ್ಲರಿಗೂ ಲಸಿಕೆ ಲಭ್ಯವಾಗುವಂತೆ ಮಾಡುವುದು ನಮ್ಮ ಮುಖ್ಯ ಸವಾಲು. ಇದು 2021ರ ನಮ್ಮ ಸವಾಲು, ಅದನ್ನು ಹೇಗೆ ನಿರ್ವಹಿಸುತ್ತೇವೆ ಎಂದು ನೋಡೋಣ" ಎಂದು ಪೂನಾವಾಲಾ ಅವರು ಎಎನ್‌ಐಗೆ ತಿಳಿಸಿದ್ದಾರೆ.
"ನಾವು ಸರ್ಕಾರದ ಕೋರಿಕೆಯ ಮೇರೆಗೆ ಮೊದಲ 100 ಮಿಲಿಯನ್ ಡೋಸ್‌ಗಳಿಗೆ 200 ರೂ.ಗಳ ವಿಶೇಷ ಬೆಲೆಯಲ್ಲಿ ಭಾರತ ಸರ್ಕಾರಕ್ಕೆ ನೀಡಿದ್ದೇವೆ. ಏಕೆಂದರೆ ನಾವು ಸಾಮಾನ್ಯ ಜನರು, ದುರ್ಬಲರು, ಬಡವರು ಮತ್ತು ಆರೋಗ್ಯ ಕಾರ್ಯಕರ್ತರನ್ನು ಬೆಂಬಲಿಸಲು ಬಯಸುತ್ತೇವೆ. ನಂತರ, ನಾವು ಅದನ್ನು ಖಾಸಗಿ ಮಾರುಕಟ್ಟೆಗಳಲ್ಲಿ ಪ್ರತಿ ಡೋಸ್ ಗೆ 1,000 ರೂ. ಬೆಲೆಗೆ ಮಾರಾಟ ಮಾಡುತ್ತೇವೆ ಎಂದು ಪೂನಾವಾಲಾ ಅವರು ಹೇಳಿದ್ದಾರೆ.
ಖಾಸಗಿ ಮಾರುಕಟ್ಟೆಯಲ್ಲಿ ಕೋವಿಶೀಲ್ಡ್ ಲಸಿಕೆ ಮಾರಾಟಕ್ಕೆ ಸರ್ಕಾರ ನಮಗೆ ಇನ್ನೂ ಅನುಮತಿ ನೀಡಿಲ್ಲ ಎಂದು ಎಸ್‌ಐಐ ಸಿಇಒ ತಿಳಿಸಿದ್ದಾರೆ.
ಖಾಸಗಿ ಮಾರುಕಟ್ಟೆಯಲ್ಲಿ, ಲಸಿಕೆ ಖರೀದಿಸಲು ಬಯಸುವವರಿಗೆ 1,000 ರೂ. ಬೆಲೆ ನಿಗದಿ ಮಾಡಲಾಗಿದೆ. ಆದರೆ ಇದಕ್ಕೆ ಸರ್ಕಾರದಿಂದ ಅನುಮತಿ ಪಡೆದಿಲ್ಲ" ಎಂದು ಅವರು ಹೇಳಿದರು.