ಬೆಂಗಳೂರು: ಕೆಜಿಎಫ್-2 ಚಿತ್ರದ ಟೀಸರ್ ನಲ್ಲಿ ನಟ ಯಶ್ ಅವರು ಬಂದೂಕಿನಿಂದ ಸಿಗರೇಟ್ ಹಚ್ಚಿಕೊಂಡ ದೃಶ್ಯಗಳು ಕಂಡು ಬಂದ ಹಿನ್ನೆಲೆಯಲ್ಲಿ ನಟ ಯಶ್ ಅವರಿಗೆ ರಾಜ್ಯ ಆರೋಗ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಕೆಜಿಎಫ್-2 ಟೀಸರ್ ನಲ್ಲಿ ಯಶ್ ಅವರು ಬಂದೂಕಿನಿಂದ ಸಿಗರೇಟ್ ಹಚ್ಚಿಕೊಂಡ ದೃಶ್ಯ ಸಾಕಷ್ಟು ಜನರ ಮನ ಗೆದ್ದಿದೆ. ಹೀಗಾಗಿ ಧೂಮಪಾನ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಇಂತಹ ದೃಶ್ಯಗಳು ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದು ಹೇಳಿ ಆರೋಗ್ಯ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ದೃಶ್ಯವನ್ನು ತೆಗೆದು ಹಾಕುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಚಿತ್ರದಲ್ಲಿನ ಈ ದೃಶ್ಯ ಯುವ ಸಮುದಾಯವನ್ನ ಸಿಗರೇಟ್ ಸೇದುವಂತೆ ಪ್ರಚೋದಿಸುತ್ತದೆ. ಅಲ್ಲದೇ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆ 2003, ಸೆಕ್ಷನ್ 5 ರ ಪ್ರಕಾರ ನಿಬಂಧನೆಗಳ ಉಲ್ಲಂಘನೆಯಾಗಿದೆ. ಲಕ್ಷಾಂತರ ಜನ ಯುವ ಅಭಿಮಾನಿಗಳನ್ನ ನೀವು ಹೊಂದಿದ್ದೀರಾ ಹಾಗೂ ಆ ಯುವ ಸಮುದಾಯ ನಿಮ್ಮನ್ನ ಅನುಸರಿಸುತ್ತದೆ.
ಯುವ ಸಮುದಾಯ ಸಿಗರೇಟ್ ಸೇದುವ ಪ್ರಚೋದನೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಇರುವ ಟೀಸರ್ನಲ್ಲಿ ಸಿಗರೇಟ್ ಸೇದುವ ದೃಶ್ಯ ತೆಗೆಯಿರಿ ಎಂದು ಆರೋಗ್ಯ ಇಲಾಖೆ ಸೂಚಿಸಿದೆ ಎಂದು ವರದಿಗಳು ತಿಳಿಸಿವೆ.
ನೋಟಿಸ್ ಸಂಬಂಧ ಇದೀಗ ಆರೋಗ್ಯ ಸಚಿವ ಸುಧಾಕರ್ ಅವರು ಸ್ಪಷ್ಟನೆ ನೀಡಿದ್ದು, ಯಶ್ ಅವರಿಗೆ ನೀಡಿರುವುದು ನೋಟಿಸ್ ಅಲ್ಲ, ಮನವಿ ಅಷ್ಟೇ ಎಂದು ತಿಳಿಸಿದ್ದಾರೆ.
ಕೇವಲ ನಟ ಯಶ್ ಅವರಿಗಷ್ಟೇ ಅಲ್ಲ, ಎಲ್ಲಾ ನಟರಿಗೂ ಮನವಿ ಮಾಡಿಕೊಳ್ಳುತ್ತೇವೆ. ಸಾವಿರಾರು ಅಭಿಮಾನಿಗಳು ನಿಮ್ಮನ್ನು ಫಾಲೋ ಮಾಡುತ್ತಿರುತ್ತಾರೆ. ಹಾಗಿರುವಾಗ ಸಿಗರೇಟ್ ಸೇದುವುದು ಎಲ್ಲಾ ತೋರಿಸಬಾರದು. ಏಕೆಂದರೆ ಕ್ಯಾನ್ಸರ್ ಪೀಡಿತರು ದೇಶದಲ್ಲಿ ಹೆಚ್ಚಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ದೃಶ್ಯಗಳನ್ನು ತೋರಿಸದೆ, ಜಾಗೃತಿ ಮೂಡಿಸಬೇಕೆಂದಿದ್ದಾರೆ.