ನವದೆಹಲಿ: ಈ ಹಿಂದಿನ ಆರ್ಥಿಕ ವರ್ಷದ ಆರ್ಥಿಕ ಬೆಳವಣಿಗೆಗೆ ಹೋಲಿಕೆ ಮಾಡಿದರೆಈ ಆರ್ಥಿಕ ವರ್ಷದಲ್ಲಿ ಆರ್ಥಿಕ ಬೆಳವಣಿಗೆ ಶೇ.7.7 ರಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್.ಎಸ್.ಒ) ಅಂದಾಜಿಸಿದೆ.
ಕೋವಿಡ್-19 ಕಾರಣದಿಂದಾಗಿ ಆರ್ಥಿಕ ವರ್ಷದಲ್ಲಿ ಆರ್ಥಿಕ ಬೆಳವಣಿಗೆ ಶೇ.7.7 ರಷ್ಟು ಕುಸಿಯಲಿದೆ ಎಂದು ಅಂದಾಜಿಸಲಾಗಿದೆ.
ಎನ್.ಎಸ್.ಒ ನಿನ್ನೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ 2020-21 ರಲ್ಲಿ ರಿಯಲ್ ಜಿಡಿಪಿ 134.40 ಲಕ್ಷ ಕೋಟಿ ರೂಪಾಯಿಗಳ ಮಟ್ಟಕ್ಕೆ ತಲುಪಲಿದೆ. ಇದು 2019-20 ರಲ್ಲಿ ರೂಪಾಯಿ 145.66 ಲಕ್ಷ ಕೋಟಿಯಲ್ಲಿತ್ತು.
2020-21 ರ ಸಾಲಿನ ರಿಯಲ್ ಜಿಡಿಪಿ ಋಣಾತ್ಮಕ ಹಂತ ತಲುಪಲಿದ್ದು ಶೇ.-7.7 ರಷ್ಟಿರಲಿದೆ. ಇದು 2019-20 ರಲ್ಲಿ 4.2 ರಷ್ಟಿತ್ತು. ಹಾಲಿ ಆರ್ಥಿಕ ವರ್ಷದಲ್ಲಿ ಉತ್ಪಾದನಾ ವಲಯ ಶೇ.9.4 ರಷ್ಟು ಕುಸಿತ ಕಾಣುವ ಸಾಧ್ಯತೆ ಇದ್ದು, ಕಳೆದ ವರ್ಷ ಬೆಳವಣಿಗೆ ಶೇ.0.03 ರಷ್ಟಿತ್ತು. ಗಣಿಕಾರಿಗೆ, ಕಲ್ಲುಗಣಿ (ಕ್ವಾರಿ), ವ್ಯಾಪಾರ, ಹೊಟೇಲ್ ಗಳು, ಸಾರಿಗೆ, ಸಂವಹನ ಕ್ಷೇತ್ರ, ಪ್ರಸಾರ ವಿಭಾಗದ ಸೇವೆಗಳಲ್ಲಿಯೂ ಗಣನೀಯ ಪ್ರಮಾಣದ ಕುಸಿತವನ್ನು ಎನ್.ಎಸ್.ಒ ಅಂದಾಜಿಸಿದೆ.
2020-21 ರಲ್ಲಿ ಕೃಷಿ ಕ್ಷೇತ್ರ ಶೇ.3.4 ರಷ್ಟು ಬೆಳವಣಿಗೆ ದಾಖಲಿಸಲಿದೆ. ಆದರೆ 2019-20 ರಲ್ಲಿ ದಾಖಲಾಗಿದ್ದ ಶೇ.4 ರಷ್ಟಕ್ಕಿಂತಲೂ ಇದು ಕಡಿಮೆ ಇರಲಿದೆ ಎಂದು ವಿಶ್ಲೇಷಿಸಿದೆ. ಆರ್ಥಿಕ ಬೆಳವಣಿಗೆ ಮೊದಲ ತ್ರೈಮಾಸಿಕದಲ್ಲಿ ಶೇ.23.9 ರಷ್ಟು ಹಾಗೂ ಎರಡನೇ ತ್ರೈಮಾಸಿಕದಲ್ಲಿ ಶೇ.7.5 ರಷ್ಟು ಕುಸಿತ ಕಾಣಲಿದೆ ಎಂದು ಹೇಳಿದೆ.