ಓಸ್ಲೋ: ನಾರ್ವೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ 23 ಮಂದಿ ವಯೋ ವೃದ್ಧರು ಮೃತಪಟ್ಟಿದ್ದಾರೆ.
ಇದರಿಂದ ನಾರ್ವೆ ಸರ್ಕಾರ ವಯೋವೃದ್ದರು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಲಸಿಕೆ ನೀಡದಂತೆ ಸೂಚಿಸಿದೆ.
ಫೈಝರ್ ಎನ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದ 23 ವೃದ್ಧರು ಸಾವನ್ನಪ್ಪಿದ್ದಾರೆ. ಈ ಪೈಕಿ 13 ಮಂದಿಯ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವ್ಯಾಕ್ಸಿನೇಷನ್ ನಂತರ ಉಂಟಾದ ಅಡ್ಡ ಪರಿಣಾಮಗಳ ತೀವ್ರತೆಯಿಂದ ಅವರು ಸಾವನ್ನಪ್ಪಿದ್ದಾರೆ ಎಂದು ನಾರ್ವೇಜಿಯನ್ ಮೆಡಿಸಿನ್ಸ್ ಏಜೆನ್ಸಿ ವರದಿ ಮಾಡಿದೆ.
ಲಸಿಕೆ ತೆಗೆದುಕೊಂಡ ನಂತರ ಕಂಡು ಬರುವ ಸಾಮಾನ್ಯ ಅಡ್ಡಪರಿಣಾಮಗಳು ತುಂಬಾ ದುರ್ಬಲವಾಗಿರುವ ವ್ಯಕ್ತಿಗಳಲ್ಲಿ ಗಂಭೀರ ಸ್ವರೂಪ ಪಡೆದುಕೊಂಡು ಮೃತಪಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ವಯೋವೃದ್ಧರು ಹಾಗೂ ಆರೋಗ್ಯ ಸಮಸ್ಯೆ ಹೊಂದಿರುವ ವ್ಯಕ್ತಿಗಳಿಗೆ ಲಸಿಕೆ ನೀಡಬಾರದು ಎಂದು ನಾರ್ವೇಜಿಯನ್ ಅಧಿಕಾರಿಗಳು ಸೂಚಿಸಿದ್ದಾರೆ. ಅತ್ಯಲ್ಪ ಜೀವಿತಾವಧಿ ಹೊಂದಿರುವವರು ಲಸಿಕೆ ಪಡೆಯುವುದರಿಂದ ಹೆಚ್ಚಿನ ಪ್ರಯೋಜನ ಲಭಿಸುವುದಿಲ್ಲ ಎಂದು ನಾರ್ವೇಜಿಯನ್ ಆರೋಗ್ಯ ಸಚಿವಾಲಯ ಹೇಳಿದೆ. ಆರೋಗ್ಯವಂತರು, ಯುವಜನರು ಲಸಿಕೆ ತೆಗೆದುಕೊಳ್ಳಬಹು ಎಂದು ನಾರ್ವೇಜಿಯನ್ ಸರ್ಕಾರ ಹೇಳಿದೆ.
ಲಸಿಕೆ ಹಾಕಿದ ನಂತರ 23 ಜನರು ಸಾವನ್ನಪ್ಪಿದ ಘಟನೆಯ ಬಗ್ಗೆ ಫೈಝರ್ ತನಿಖೆ ನಡೆಸುತ್ತಿದೆ. ಲಸಿಕೆ ಪಡೆದುಕೊಂಡ ನಂತರ ಸಮಸ್ಯೆ ಎದುಸುತ್ತಿರುವವರ ಸಂಖ್ಯೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ.
ಈ ಹಿಂದೆ ನಿರೀಕ್ಷಿಸಿದಂತೆ ಘಟನೆಗಳು ನಡೆಯುತ್ತಿವೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಈವರೆಗೆ ನಾರ್ವೆಯಲ್ಲಿ, ಸೋಂಕು ತಗುಲುವ ಅಪಾಯದಲ್ಲಿರುವ ಸುಮಾರು 33,000 ಜನರಿಗೆ ಲಸಿಕೆ ನೀಡಲಾಗಿದೆ. 29 ಪ್ರಕರಣಗಳಲ್ಲಿ ಅಡ್ಡಪರಿಣಾಮಗಳು ಕಂಡುಬಂದಿವೆ. ಈ ಪೈಕಿ ಮೂರನೇ ಒಂದು ರಷ್ಟು 80 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಹೇಳಲಾಗಿದೆ.