ತಿರುವನಂತಪುರ: ರಾಜ್ಯ ಸರ್ಕಾರಿ ನೌಕರರ ವೇತನವನ್ನು ಶೇ 10 ರಷ್ಟು ಹೆಚ್ಚಿಸಲು ವೇತನ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕನಿಷ್ಠ ಮೂಲ ವೇತನವನ್ನು 23,000 ರೂ.ಗೆ ಹೆಚ್ಚಿಸುವ ಶಿಫಾರಸು ಸೇರಿದಂತೆ ವರದಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಆಯೋಗವು ಶುಕ್ರವಾರ ಸಮರ್ಪಿಸಿದೆ.
ಪ್ರಸ್ತುತ ಕನಿಷ್ಠ ಮೂಲ ವೇತನ 16,500 ರೂ.ಇದ್ದು ಇದನ್ನು 23000 ಕ್ಕೆ ಹೆಚ್ಚಿಸಲು ಸೂಚಿಸಲಾಗಿದೆ. ಗರಿಷ್ಠ ಮೂಲ ವೇತನವನ್ನು 1,66,800 ರೂ.ಗೆ ಹೆಚ್ಚಿಸಲು ಸೂಚನೆ ನೀಡಲಾಗಿದೆ. ಮನೆಬಾಡಿಗೆ ಭತ್ತೆಯನ್ನು ಹೆಚ್ಚಿಸಲೂ ಆಯೋಗ ಶಿಫಾರಸು ಮಾಡಿದೆ.
ಕಾರ್ಪೋರೇಶನ್ ವ್ಯಾಪ್ತಿಯಲ್ಲಿ ಶೇ.10ರಷ್ಟು ಹಾಗೂ ಜಿಲ್ಲಾ ಕೇಂದ್ರ ಕಚೇರಿ ಇರುವ ನಗರಸಭೆ ವ್ಯಾಪ್ತಿಯಲ್ಲಿ ಶೇ. ಎಂಟರಷ್ಟು ಮತ್ತು ಇತರ ಗ್ರಾಮ ಪ್ರದೇಶಗಳಲ್ಲಿ ಶೇ. ಆರು ಬಾಡಿಗೆ ಹೆಚ್ಚಳಗೊಳಿಸಬೇಕೆಂದು ಎಂದು ಶಿಫಾರಸು ಹೇಳುತ್ತದೆ.
ಪಂಚಾಯತ್ ಮಿತಿಯಲ್ಲಿ ಅದು ಸಂಬಳದ ಶೇ.4 ಆಗಿರಬೇಕು ಎಂದು ಶಿಫಾರಸು ಬೊಟ್ಟುಮಾಡಿದೆ. ಪಿಂಚಣಿಯಲ್ಲಿ ಕನಿಷ್ಠ 11,500 ರೂ. ಹಾಗೂ ಗರಿಷ್ಠ ಪಿಂಚಣಿ 83,400 ನೀಡಬೇಕೆಂದು ವರದಿ ತಿಳಿಸಿದೆ.