ಕಾಸರಗೋಡು: ನಾದದ ಪ್ರಾತಿನಿಧಿಕ ಸ್ವರೂಪವಾದ ಸಂಗೀತ ಜೀವಕೋಟಿಯ ಚೈತನ್ಯ ಸ್ವರೂಪವಾಗಿದೆ. ಸ್ವರ-ಲಯಪೂತವಾದ ಸ್ವರ ಜಗತ್ತಿಗೆ ವೈಜ್ಞಾನಿಕ ಶಕ್ತಿ ಇದೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ತಿಳಿಸಿದರು.
ಕಾಸರಗೋಡು ಲಲಿತ ಕಲಾಸದನದಲ್ಲಿ ಇಂದು ಆಯೋಜಿಸಲಾಗಿರುವ(ಭಾನುವಾರ)ವಿದುಷಿ ಉಷಾ ಈಶ್ವರ ಭಟ್ ಅವರ ವಿದ್ಯಾನಗರ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ 24 ನೇ ವಾರ್ಷಿಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕಾಸರಗೋಡಿನ ಸಂಗೀತ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀಗೋಪಾಲಕೃಷ್ಣ ಸಂಗೀತ ಕಲಾಶಾಲೆಯ ಅಪರಿಮಿತ ಕಲಾಸೇವೆ ಸ್ತುತ್ಯರ್ಹವಾದುದು. ಸಂಗೀತದ ಎಲ್ಲಾ ಆಯಾಮಗಳಲ್ಲೂ ನೂರಾರು ಪ್ರತಿಭೆಗಳಿಗೆ ವಿದ್ಯೆಯನ್ನು ಧಾರೆಯೆರೆಯುವ ಮೂಲಕ ನಿರ್ಮಿಸಿರುವ ಸಂಗೀತ ಪ್ರಪಂಚ ಜಿಲ್ಲೆಗೆ ಹೆಮ್ಮೆ ಎಂದು ಶ್ರೀಗಳು ತಿಳಿಸಿದರು.
ಹಿರಿಯ ನ್ಯಾಯವಾದಿ ಎಂ.ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಎಡನೀರು ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಎಡನೀರು, ಧಾರ್ಮಿಕ ಮುಖಂಡ ವೆಂಕಟರಮಣ ಹೊಳ್ಳ ಕಾಸರಗೋಡು, ವಿದುಷಿಃ ಉಷಾ ಈಶ್ವರ ಭಟ್ ಉಪಸ್ಥಿತರಿದ್ದರು.
ಸಂಗೀತ ಕಲಾಶಾಲೆಯ ಸಂಚಾಲಕ ವಿದ್ವಾನ್.ಬಿ.ಜಿ.ಈಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಂದಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ವಿದ್ವಾನ್ ಪ್ರಭಾಕರ ಕುಂಜಾರು, ಡಾ. ಮಾಯಾ ಮಲ್ಯ, ಕೋವೈ ಕಣ್ಣನ್, ರಾಜೀವ್ ಗೋಪಾಲ್ ವೆಳ್ಳಿಕೋತ್, ಟಿ.ಕೆ.ವಾಸುದೇವ ಕಾಞಂಗಾಡು ಹಿಮ್ಮೇಳದಲ್ಲಿ ಸಹಕರಿಸಿದರು. ಅಪರಾಹ್ನ 3ರಿಂದ ಪ್ರಖ್ಯಾತ ಕಲಾವಿದ ವಿದ್ವಾನ್ ವಿಷ್ಣುದೇವ್ ಕೆ.ಎಸ್.ಚೆನೈ ಅವರ ಸಂಗೀತ ಕಛೇರಿ ಜರಗಲಿದೆ. ವಯಲಿನ್‍ನಲ್ಲಿ ವಿದ್ವಾನ್ ಗೋಕುಲ್ ವಿ.ಎಸ್.ಅಲಂಕೋಡ್, ಮೃದಂಗದಲ್ಲಿ ವಿದ್ವಾನ್ ಬಾಲಕೃಷ್ಣ ಕಾಮತ್ ಕೊಚ್ಚಿ, ಮೋಸಿರ್ಂಗ್‍ನಲ್ಲಿ ವಿದ್ವಾನ್ ಗೋವಿಂದ ಪ್ರಸಾದ್ ಪಯ್ಯನ್ನೂರು ಸಹಕರಿಸಲಿದ್ದಾರೆ.