ಚೆನ್ನೈ: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ತಮಿಳುನಾಡಿನಲ್ಲಿ ಲಾಕ್ ಡೌನ್ ಅವಧಿಯನ್ನು ಫೆಬ್ರವರಿ.28ರವರೆಗೂ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಘೋಷಿಸಿದ್ದಾರೆ.
ತಮಿಳುನಾಡಿನಲ್ಲಿ ಇದುವರೆಗೂ 8,87,720 ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಮಹಾಮಾರಿಗೆ ಒಟ್ಟು 7153 ಜನರು ಪ್ರಾಣ ಬಿಟ್ಟಿದ್ದು, ಸೋಂಕಿಗೆ ಚಿಕಿತ್ಸೆ ಪಡೆದ 8,79,278 ಜನರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 1289 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ರಾಜ್ಯವನ್ನು ಕೊರೊನಾವೈರಸ್ ಸೋಂಕುಮುಕ್ತಗೊಳಿಸುವ ನಿಟ್ಟಿನಲ್ಲಿ ಫೆಬ್ರವರಿ.28ರವರೆಗೂ ಲಾಕ್ ಡೌನ್ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಕೆಲ ನಿಯಮಗಳು ಸಡಿಲಗೊಳಿಸಲಾಗಿದ್ದು, ಶಾಲೆ-ಕಾಲೇಜು ಮತ್ತು ಸಿನಿಮಾ ಮಂದಿರಗಳಲ್ಲಿ ಶೇ.100ರಷ್ಟು ಜನರಿಗೆ ಅವಕಾಶ ನೀಡಲಾಗಿದೆ. ತಮಿಳುನಾಡಿನಲ್ಲಿ ಮುಂದಿನ ಒಂದು ತಿಂಗಳಿನಲ್ಲಿ ಯಾವೆಲ್ಲ ವಲಯಗಳಿಗೆ ಸಂಪೂರ್ಣ ಅನುಮತಿಯಿದೆ. ಯಾವುದಕ್ಕೆಲ್ಲ ನಿರ್ಬಂಧ ಮುಂದುವರಿಸಲಾಗಿದೆ ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ತಮಿಳುನಾಡು ಲಾಕ್ ಡೌನ್ ಪ್ರಮುಖ ಅಂಶಗಳು:
- 9 ಮತ್ತು 11ನೇ ತರಗತಿಗಳ ವಿದ್ಯಾರ್ಥಿಗಳಿಗೆ ಹಾಗೂ ಫೆಬ್ರವರಿ. 8ರಿಂದ ಪದವಿಪೂರ್ವ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ತರಗತಿ ಪುನರಾರಂಭ.
- ಫೆಬ್ರವರಿ.1ರಿಂದ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಜನರಿಗೆ ಅವಕಾಶ
- ರಾಮೇಶ್ವರ ನದಿಯಲ್ಲಿ ಪುಣ್ಯಸ್ನಾನ ಮಾಡುವುದಕ್ಕೆ ಭಕ್ತರಿಗೆ ಅನುಮತಿ
- ದಿನದ 24 ಗಂಟೆಗಳ ಕಾಲ ಪೆಟ್ರೋಲ್ ಬಂಕ್ ಗಳನ್ನು ತೆರೆಯುವುದಕ್ಕೆ ಅವಕಾಶ
- ಈಜುಕೊಳ ಮತ್ತು ಎಕ್ಸಿಬಿಷನ್ ಗಳನ್ನು ಪುನಾರಂಭಿಸುವುದಕ್ಕೆ ಅನುಮತಿ
- ಸಾಮಾಜಿಕ, ರಾಜಕೀಯ, ಮನರಂಜನಾ ಮತ್ತು ಕ್ರೀಡಾ ಕಾರ್ಯಕ್ರಮಗಳಲ್ಲಿ ಶೇ.50ರಷ್ಟು ಜನರು ಸೇರುವುದಕ್ಕೆ ಅವಕಾಶ ನೀಡಲಾಗಿದೆ
ತಮಿಳುನಾಡಿನಲ್ಲಿ ಯಾವುದಕ್ಕೆಲ್ಲ ನಿರ್ಬಂಧ?:
- ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ನಿರ್ಬಂಧ ಮುಂದುವರಿಕೆ (ಕೇಂದ್ರ ಸರ್ಕಾರ ಅನುಮತಿ ನೀಡಿರುವ ವಿಮಾನಗಳ ಸಂಚಾರವನ್ನು ಹೊರತುಪಡಿಸಿ)
- ರಾಜ್ಯದಲ್ಲಿ ಅತಿಹೆಚ್ಚು ಕೊವಿಡ್-19 ಪ್ರಕರಣಗಳಿರುವ ಕಂಟೇನ್ಮೆಂಟ್ ಝೋನ್ ಗಳಲ್ಲಿ ನಿರ್ಬಂಧಗಳು ಮುಂದುವರಿಯಲಿವೆ.