ಬದಿಯಡ್ಕ: ಕೊಡುಗೈದಾನಿ ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ ಬಡಜನತೆಗೆ ಉಚಿತವಾಗಿ ನಿರ್ಮಿಸಿಕೊಡುವ ಮನೆಯ ಕೀಲಿಕೈ ಹಸ್ತಾಂತರ ಕಾರ್ಯಕ್ರಮವು ಶನಿವಾರ ಕಿಳಿಂಗಾರು ಸಾಯಿ ನಿವಾಸದಲ್ಲಿ ಜರಗಿತು.
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಆಶೀರ್ವಚನವನ್ನು ನೀಡಿ, ಸಾಯಿರಾಂ ಭಟ್ ಅವರ ನಿರಂತರ ಆರ್ತರ ಸೇವೆ ಮಾದರಿಯಾದುದು. ಜೀವನ ಸಾಫಲ್ಯತೆಗೆ ಸೇವಾ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳುವುದು ಉದಾತ್ತತೆಗೆ ಕಾರಣವಾಗುವುದು ಎಂದರು. ಫಲಾನುಭವಿಗಳಾದ ಸುಮತಿ ಇಕ್ಕೇರಿ ಹಾಗೂ ಸತ್ಯನಾರಾಯಣ ಭಟ್ ಬಾರಡ್ಕ ಅವರಿಗೆ 263, 264ನೇ ಮನೆಯ ಕೀಲಿಕೈಯನ್ನು ಹಸ್ತಾಂತರಿಸಿದರು. ವೇದಮೂರ್ತಿ ಕಿಳಿಂಗಾರು ನಡುಮನೆ ಗೋಪಾಲಕೃಷ್ಣ ಭಟ್ ಶುಭಕೋರಿದರು. ಬದಿಯಡ್ಕ ಗ್ರಾಮಪಂಚಾಯಿತಿ ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷೆ ಸೌಮ್ಯಾ ಮಹೇಶ್ ನಿಡುಗಳ, ಸತೀಶ ಎಡನೀರು, ಸೂರ್ಯನಾರಾಯಣ ಭಟ್ ಎಡನೀರು, ಸಾಯಿರಾಂ ಭಟ್ ಮನೆಯವರು ಉಪಸ್ಥಿತರಿದ್ದರು. ಬದಿಯಡ್ಕ ಗ್ರಾ.ಪಂ. ಸದಸ್ಯ ಕೆ.ಎನ್.ಕೃಷ್ಣ ಭಟ್ ಕಿಳಿಂಗಾರು ಸ್ವಾಗತಿಸಿ, ಸಂಜೀವ ರೈ ವಂದಿಸಿದರು.