ನವದೆಹಲಿ: 2008ರ ಮುಂಬೈ ಭಯೋತ್ಪಾದಕ ದಾಳಿಯ ಹುತಾತ್ಮ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ಸಿನಿಮಾ "ಮೇಜರ್" ಜುಲೈ 2ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ನಟ ಆದಿವಿಶೇಷ್ ಹೇಳಿದ್ದಾರೆ.
ಶಶಿ ಕಿರಣ್ ನಿರ್ದೇಶನದ "ಮೇಜರ್" ನಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿರುವ ಆದಿವಿಶೇಷ್ ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ.
"ಧೈರ್ಯಶಕ್ತಿ, ನನ್ನ ಕನಸಿನ ಯೋಜನೆ "ಮೇಜರ್" 2 ಜುಲೈ, 2021ಕ್ಕೆ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆದೆ" ಎಂದು ಚಿತ್ರದ ಪೋಸ್ಟರ್ ಜೊತೆಗೆ ಆದಿವಿಶೇಷ್ ಟ್ವೀಟ್ ಮಾಡಿದ್ದಾರೆ.
ಮುಂಬೈನ ತಾಜ್ ಹೋಟೆಲ್ ನಲ್ಲಿ 26/11 ರ ದಾಳಿಯ ಸಮಯದಲ್ಲಿ ಹಲವಾರು ಒತ್ತೆಯಾಳುಗಳನ್ನುಇರಿಸಿಕೊಂಡಿದ್ದ ಉಗ್ರವಾದಿಗಳ ವಿರುದ್ಧ ಹೋರಾಡಿ ರಾಷ್ಟ್ರಕ್ಕಾಗಿ ತನ್ನ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಧೈರ್ಯಶಾಲಿ ಎನ್.ಎಸ್.ಜಿ ಕಮಾಂಡೋ ಮೇಜರ್ ಸಂದೀಪ್ ಅವರ ಜೀವನದಿಂದ ಈ ಸಿನಿಮಾ ಕಥೆ ಸ್ಫೂರ್ತಿ ಪಡೆದಿದೆ.
ಮೇಜರ್ ಸಂದೀಪ್ ಅವರಿಗೆ ಶಾಂತಿ ಕಾಲದಲ್ಲಿ ಭಾರತದ ಅತ್ಯುನ್ನತ ಮಿಲಿಟರಿ ಗೌರವ ಅಶೋಕ ಚಕ್ರ ನೀಡಿ ಗೌರವಿಸಲಾಗಿದೆ.
ಚಿತ್ರದಲ್ಲಿಶೋಭಿತಾ ಧುಲಿಪಾಲಾ, ಸಾಯಿ ಮಂಜ್ರೇಕರ್, ಪ್ರಕಾಶ್ ರಾಜ್, ರೇವತಿ ಮತ್ತು ಮುರಳಿ ಶರ್ಮಾ ಮೊದಲಾದವರು ಅಭಿನಯಿಸಿದ್ದಾರೆ.ಇದನ್ನು ಮಹೇಶ್ ಬಾಬು ಅವರ ಜಿಎಂಬಿ ಎಂಟರ್ಟೈನ್ಮೆಂಟ್ ಮತ್ತು A+S ಮೂವೀಸ್ ಸಹಯೋಗದಲ್ಲಿ ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಇಂಡಿಯಾ ಚಿತ್ರ ನಿರ್ಮಾಣ ಮಾಡಿದೆ.