ನವದೆಹಲಿ: ಫೆಬ್ರವರಿ 1 ರಂದು 2021-2022ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಈ ಹಿನ್ನೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಜನವರಿ 30 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ.
ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಜನವರಿ 30 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿಯವರು ಸರ್ವಪಕ್ಷ ಸಭೆ ನಡೆಸಲಿದ್ದಾರೆಂದು ವರದಿಗಳು ತಿಳಿಸಿವೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಕೇಂದ್ರ ಬಜೆಟ್ 2021-22 ಅನ್ನು ಮಂಡಿಸಲಿದ್ದಾರೆ.
ಬಜೆಟ್ ಅಧಿವೇಶನವು ಜನವರಿ 29 ರಿಂದ ಫೆಬ್ರವರಿ 15 ರವರೆಗೆ ಮತ್ತು ಮಾರ್ಚ್ 8 ರಿಂದ ಏಪ್ರಿಲ್ 8 ರವರೆಗೆ ಎರಡು ಭಾಗಗಳಲ್ಲಿ ನಡೆಯಲಿದೆ.
ಈ ವೇಳೆ ದೇಶದ ಮಹತ್ವದ ಕೇಂದ್ರ ಬಜೆಟ್ ಸಹ ಮಂಡನೆಯಾಗುತ್ತಿರುವುದು ವಿಶೇಷ. ಈ ವರ್ಷ ಭಾರತ ಆರ್ಥಿಕತೆ ಕೊರೋನಾ ಸಾಂಕ್ರಾಮಿಕ ವೈರಸ್ಗೆ ಸಿಲುಕಿ ಸಾಕಷ್ಟು ನಷ್ಟ ಅನುಭವಿಸಿದೆ.
ದೇಶದ ಆರ್ಥಿಕತೆ ಐತಿಹಾಸಿಕ ದಾಖಲೆಯ ಮಟ್ಟಕ್ಕೆ ಕುಸಿತ ಕಂಡಿದೆ. ಇಂತಹ ಸಮಯದಲ್ಲಿ ಈ ವರ್ಷ ಬಜೆಟ್ ಮಂಡನೆಯಾಗುತ್ತಿರುವುದು ಆರ್ಥಿಕತೆಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದಲ್ಲದೆ, ಈ ವರ್ಷದ ಬಜೆಟ್ ಸಚಿವೆ ನಿರ್ಮಾಲಾ ಸೀತಾರಾಮನ್ ಮಂಡಿಸುತ್ತಿರುವ ಮೂರನೇ ಪೂರ್ಣಾವಧಿ ಬಜೆಟ್ ಆಗಿರುವ ಕಾರಣ ಸಾಕಷ್ಟು ನಿರೀಕ್ಷೆಗಳೂ ಗರಿಗೆದರಿವೆ.