ಇಸ್ಲಾಮಾಬಾದ್ : ಪಾಕಿಸ್ತಾನದ ಬಾಲಾಕೋಟ್ ಅಡಗುತಾಣದಲ್ಲಿದ್ದ ಉಗ್ರರ ಶಿಬಿರದ ಮೇಲೆ ಭಾರತ ಸರ್ಜಿಕಲ್ ದಾಳಿ ನಡೆಸಿದ್ದರ ಸತ್ಯಾಸತ್ಯತೆ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಈಗ ಈ ದಾಳಿ ಹಾಗೂ 300ಕ್ಕೂ ಅಧಿಕ ಉಗ್ರರ ಹತ್ಯೆ ಕುರಿತ ಸುದ್ದಿಯೊಂದು ಬಂದಿದೆ. ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಅಧಿಕಾರಿ ಆಘಾ ಹಿಲಾಲಿ ಎಂಬುವರು ಸರ್ಜಿಕಲ್ ದಾಳಿ ನಡೆದಿದ್ದು ನಿಜ, ಉಗ್ರರು ಸತ್ತಿದ್ದು ಸತ್ಯ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
''ಅಂತಾರಾಷ್ಟ್ರೀಯ ಗಡಿ ದಾಟಿ ಭಾರತ ಸರ್ಜಿಕಲ್ ದಾಳಿ ನಡೆಸಿತು. ಪಾಕಿಸ್ತಾನಕ್ಕೆ ಇದಕ್ಕೆ ತಕ್ಕ ಉತ್ತರ ನೀಡಲು ಸಿದ್ಧತೆ ಮಾಡಿಕೊಂಡಿರಲಿಲ್ಲ. ಬಾಲಾಕೋಟ್ ಶಿಬಿರದಲ್ಲಿದ್ದ 300ಕ್ಕೂ ಅಧಿಕ ಉಗ್ರರು ಈ ದಾಳಿಯಿಂದ ಮೃತಪಟ್ಟರು'' ಎಂದು ಆಘಾ ಹೇಳಿದ್ದಾರೆ.
ಈ ಮೂಲಕ ಈ ಹಿಂದೆ ಅಮೆರಿಕ ಮೂಲಕ ಸಾಮಾಜಿಕ ಹೋರಾಟಗಾರರೊಬ್ಬರು ಉಗ್ರರ ಶವ ಪತ್ತೆ ಹಾಗೂ ರವಾನೆ ಬಗ್ಗೆ ನೀಡಿದ್ದ ಹೇಳಿಕೆಗೆ ಪುಷ್ಟಿ ಸಿಕ್ಕಿದೆ. ಭಾರತೀಯ ಸೇನೆ ಬಾಲಕೋಟ್‌ನಲ್ಲಿರುವ ಜೈಷ್ ಉಗ್ರರ ಅಡಗುತಾಣಗಳ ಮೇಲೆ ನಡೆಸಿದ ಏರ್‌ಸ್ಟ್ರೈಕ್ ನಲ್ಲಿ ಸಾವನ್ನಪ್ಪಿದ್ದ 200ಕ್ಕೂ ಅಧಿಕ ಮಂದಿ ಉಗ್ರರ ಶವವನ್ನು ಖೈಬರ್ ಫಂಕ್ತುಂಕ್ವಾ ಪ್ರಾಂತ್ಯಕ್ಕೆ ರವಾನೆ ಮಾಡಲಾಗಿತ್ತು ಎಂದು ಅಮೆರಿಕನ್ ಹೇಳಿದ್ದರು.
ಫೆಬ್ರವರಿ 14,2019 ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸೈನಿಕರಿದ್ದ ವಾಯನದಮೇಲೆ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿ, 44 ಯೋಧರು ಹುತಾತ್ಮರಾಗುವಂತೆ ಮಾಡಿತ್ತು. ಈ ಘಟನೆಗೆ ಪ್ರತೀಕಾರ ಎಂಬಂತೆ ಫೆ.26 ರಂದು ಭಾರತ ಪಾಕಿಸ್ತಾನದಲ್ಲಿರುವ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಫೆಬ್ರವರಿ 26ರಂದು ಬೆಳಗಿನ ಜಾವ 3.45ರ ಸುಮಾರಿಗೆ ಸ್ಪೈಸ್ ಬಾಂಬ್ ಬಳಸಿ ಭರ್ಜರಿ ದಾಳಿಯ ಸಮಯದಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ 18 ಹಿರಿಯ ಕಮಾಂಡರ್ ಗಳು ಸೇರಿದಂತೆ 250-300 ಉಗ್ರರು ಸತ್ತಿರಬಹುದು ಎಂದು ವರದಿ ಬಂದಿತ್ತು. ಈ ಬಗ್ಗೆ ಚರ್ಚೆ ಮುಂದುವರೆದಿದ್ದು, ಈಗ ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಅಧಿಕಾರಿ ಹೇಳಿಕೆ ಇದಕ್ಕೆ ಪುಷ್ಟಿ ನೀಡಿದೆ.