ಕಾಸರಗೋಡು: ಕೋವಿಡ್ ಅವಧಿಯಲ್ಲಿ ಶಾಲೆ ತೆರೆದಿರಲಿಲ್ಲ. ಈ ಅವಧಿಯಲ್ಲಿ ಶುಲ್ಕವನ್ನು ಪಾವತಿಸದ ವಿದ್ಯಾರ್ಥಿಗಳಿಗೆ ಶಾಲೆಯಿಂದ ಟಿಸಿ ನೀಡಿ ಶಾಲೆಗೆ ಬಾರದಂತೆ ತಿಳಿಸಿ ಹೃದಯ ಶೂನ್ಯತೆಗೈದ ಮಾಫಿಯಾ ವ್ಯವಸ್ಥೆ ಕಾಸರಗೋಡಲ್ಲೂ ವರದಿಯಾಗಿದ್ದು ಕಳವಳ ಮೂಡಿಸಿದೆ.
2020 ರ ಜೂನ್‍ನಿಂದ ಡಿಸೆಂಬರ್ ವರೆಗೆ ಶುಲ್ಕ ಪಾವತಿಸದ ಕಾರಣ ಕಾಸರಗೋಡು ವಿದ್ಯಾನಗರದಲ್ಲಿರುವ ಪ್ರತಿಷ್ಠಿಯ ವಿದ್ಯಾಸಂಸ್ಥೆಯಾದ ಚಿನ್ಮಯ ವಿದ್ಯಾಲಯದ 300 ವಿದ್ಯಾರ್ಥಿಗಳನ್ನು ಹೊರಹಾಕಲಾಗಿದೆ. ಶಾಲಾ ಅಧಿಕಾರಿಗಳ ಕ್ರಮದ ವಿರುದ್ಧ ಪೋಷಕರು ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ
ನ್ಯಾಯಾಲಯದ ಆದೇಶದ ಆಧಾರದ ಮೇಲೆ ಶುಲ್ಕ:
ಶಾಲೆಯನ್ನು ನಡೆಸಲು ಹೆಚ್ಚಿನ ವೆಚ್ಚವಿದೆ ಮತ್ತು ಹೈಕೋರ್ಟ್ ತೀರ್ಪಿನ ಆಧಾರದ ಮೇಲೆ ಶುಲ್ಕವನ್ನು ವಿಧಿಸಲಾಗಿದೆ ಎಂದು ಚಿನ್ಮಯ ವಿದ್ಯಾಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಶುಲ್ಕವನ್ನು ಪಾವತಿಸದ ಕಾರಣಕ್ಕಾಗಿ ಪ್ರತಿವರ್ಷ ಮಕ್ಕಳನ್ನು ಹೊರಹಾಕಲಾಗುತ್ತದೆ ಮತ್ತು ಇದರಲ್ಲಿ ವಿಶೇಷ ಏನೂ ಇಲ್ಲವೆಂದು ಅಧಿಕೃತರು ಸಮಜಾಯಿಷಿ ನೀಡಿದ್ದಾರೆ. ಕಳೆದ ವರ್ಷ ಡಿಸೆಂಬರ್ 21 ರಿಂದ ಶಿಕ್ಷಕರು ಶಾಲೆಗೆ ಬರುತ್ತಿದ್ದಾರೆ. ಮ್ಯಾನೇಜ್ಮೆಂಟ್ ಅವರಿಗೆ ಪೂರ್ಣ ವೇತನವನ್ನು ನೀಡಲು ಜವಾಬ್ದಾರಿ ಹೊಂದಿದೆ. ಅದಕ್ಕಾಗಿಯೇ ಮ್ಯಾನೇಜ್ಮೆಂಟ್ ಪೋಷಕರಲ್ಲಿ ಶುಲ್ಕವನ್ನು ಪಾವತಿಸಲು ತಿಳಿಸಿದೆ ಎನ್ನಲಾಗಿದೆ.
ಮಕ್ಕಳು ಮಾನಸಿಕವಾಗಿ ಕುಸಿದಿರುವರೆಂದು ಪೋಷಕರು:
ಉಚ್ಚಾಟನೆ ಪ್ರಕ್ರಿಯೆಯೊಂದಿಗೆ ವಿದ್ಯಾರ್ಥಿಗಳು ಸಂಪೂರ್ಣ ಮಾನಸಿಕ ಕುಸಿತದ ಸ್ಥಿತಿಯಲ್ಲಿದ್ದಾರೆ ಎಂದು ಮಕ್ಕಳ ಹಕ್ಕುಗಳ ಆಯೋಗಕ್ಕೆ ಪೋಷಕರ ದೂರಿನಲ್ಲಿ ತಿಳಿಸಿದ್ದಾರೆ. ಕೋವಿಡ್ ಅವಧಿಯಲ್ಲಿ ಸರ್ಕಾರದ ನಿಯಮಗಳು ಮತ್ತು ಮಾನವೀಯ ಮೌಲ್ಯಗಳನ್ನು ಉಲ್ಲಂಘಿಸಿ ಶಾಲಾ ಅಧಿಕಾರಿಗಳು ಹೆಚ್ಚಿನ ಶುಲ್ಕ ವಿಧಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಶುಲ್ಕ ಮೂರು ತಿಂಗಳವರೆಗೆ 9,500 ರೂ. ಎಂದು ಶಾಲೆಯಿಂದ ಸೂಚಿಸಲಾಗಿದೆ. ಮಕ್ಕಳಿಗೆ ಒದಗಿಸದ ವಿವಿಧ ಸೇವೆಗಳಿಗೆ ಶುಲ್ಕ ವಿಧಿಸಲಾಗಿರುವುದಾಗಿ ಪೋಷಕರು ಅವಲತ್ತುಕೊಂಡಿದ್ದಾರೆ.
ಜಿಲ್ಲಾಧಿಕಾರಿಗಳ ಮೌನ-ಆರೋಪ:
ಪೋಷಕರು ಶಿಕ್ಷಣ ಇಲಾಖೆ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. 300 ಮಕ್ಕಳನ್ನು ಏಕಕಾಲದಲ್ಲಿ ಶಾಲೆಯಿಂದ ಹೊರಹಾಕುವುದು ಸಾಮಾನ್ಯ ಸಂಗತಿಯಲ್ಲ. ದೂರುಗಳು ಬಂದರೂ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಚಿನ್ಮಯ ಮಿಷನ್ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಆಶ್ಚರ್ಯ ವ್ಯಕ್ತಪಡಿಸಿದ್ದು ಹಲವು ಸಂಶಯಗಳಿಗೆ ಎಡೆಮಾಡಿದೆ ಎಂದು ದೂರಲಾಗಿದೆ.