ಕಾಸರಗೋಡು: ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಠೇವಣಿ ವಂಚನಾ ಪ್ರಕರಣದಲ್ಲಿ ನೂರಕ್ಕೂ ಹೆಚ್ಚು ಕೇಸುಗಳನ್ನು ಮೈಮೇಲೆ ಹಾಕಿಕೊಂಡಿರುವ ಮಂಜೇಶ್ವರ ಶಾಸಕ ಎಂ.ಸಿ ಕಮರುದ್ದೀನ್ ನಾನಾ ಪ್ರಕರಣಗಳಲ್ಲಿ ಜಾಮೀನು ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಠೇವಣಿ ವಂಚನಾ ಪ್ರಕರಣಕ್ಕೆ ಸಂಬಂಧಿಸಿ ಹಲವು ಕೇಸುಗಳೊಂದಿಗೆ ಕಣ್ಣೂರಿನ ಕೇಂದ್ರ ಕಾರಾಗೃಹದಲ್ಲಿ ಕಳೆಯುತ್ತಿರುವ ಕಮರುದ್ದೀನ್‍ಗೆ ಜೈಲಿನಿಂದ ಹೊರ ಬರಬೇಕಾದರೆ ಇನ್ನೂ 34ಕೇಸುಗಳಲ್ಲಿ ಜಾಮೀನಿನ ಪಡೆಯಬೇಕಾಗಿದೆ.
ಹೊಸದುರ್ಗ ಪ್ರಥಮ ದರ್ಜೆ ಜ್ಯುಡಿಶೀಯಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 20, ಕಾಸರಗೋಡಿನ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ 13, ತಲಶ್ಯೇರಿ ಪ್ರಥಮ ದರ್ಜೆ ಜ್ಯುಡಿಶಿಯಲ್ ನ್ಯಾಯಾಧೀಶರ ನ್ಯಾಯಾಲಯದ ಲ್ಲಿ ಒಂದು ಪ್ರಕರಣ ವಿಚಾರಣೆಗೆ ಬಾಕಿಯಿದೆ.
ಜ. 28ರಂದು ಹೊಸದುರ್ಗ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ 14ಕೇಸುಗಳಲ್ಲಿ ಜಾಮೀನು ಲಭಿಸಿದೆ.ಒಟ್ಟು 27ಪ್ರಕರಣಗಳಿಗೆ ಸಂಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಬಾಕಿ 13ಪ್ರಕರಣಗಳಿಗೆ ಸಂಬಂಧಿಸಿದ ಜಾಮೀನು ಅರ್ಜಿಯ ವಿಚಾರಣೆ ಜ. 30ರಂದು ನಡೆಯಲಿದೆ. ಹೊಸದುರ್ಗ ನ್ಯಾಯಾಲಯವೊಂದರಲ್ಲೇ 91ಕೇಸುಗಳು ದಾಖಲಾಗಿದೆ. ಇದುವರೆಗೆ 71ಪ್ರಕರಣಗಳಲ್ಲಿ ಕಮರುದ್ದೀನ್ ಅವರಿಗೆ ಜಾಮೀನು ಲಭಿಸಿದೆ. ಕಾಸರಗೋಡು ನ್ಯಾಯಾಲಯದಲ್ಲಿ 30ಕೇಸುಗಳಿದ್ದು, 17ರಲ್ಲಿ ಜಾಮೀನು ಲಭಿಸಿದೆ. ಕಣ್ಣೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 23ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 22ಕೇಸುಗಳಲ್ಲಿ ಜಾಮೀನು ಲಭಿಸಿದೆ. ತಲಶ್ಯೇರಿ ನ್ಯಾಯಾಲಯದ ಒಂದು ಕೇಸಿನಲ್ಲಿ ಮಾತ್ರ ಜಾಮೀನು ಲಭಿಸಲು ಬಾಕಿಯಿದೆ.