ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಮುಂದುವರೆದಿರುವಂತೆಯೇ ಇತ್ತ ಜನವರಿ 4ರಂದು ನಡೆಯುವ ಮಾತುಕತೆ ವಿಫಲವಾದರೆ ಹರ್ಯಾಣದಲ್ಲಿ ಮಾಲ್ ಮತ್ತು ಪೆಟ್ರೋಲ್ ಬಂಕ್ ಗಳನ್ನು ಬಂದ್ ಮಾಡುವ ದಿನಾಂಕ ಘೋಷಣೆ ಮಾಡುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಮೂರು ಹೊಸ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸಬೇಕು ಮತ್ತು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ನೀಡಬೇಕು ಎಂದು ಒತ್ತಾಯಿಸಿರುವ ರೈತರು ಸರ್ಕಾರ ತಮ್ಮ ಪರವಾಗಿ ನಿರ್ಧಾರ ತೆಗೆದುಕೊಳ್ಳದಿದ್ದರೆ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮುಂದಿನ ಜನವರಿ 4 ರಂದು ಸಭೆ ನಿಗದಿಯಾಗಿದೆ. ಈ ವರೆಗೆ ನಡೆದ ಸಭೆಗಳಲ್ಲಿ ನಮ್ಮ ಬೇಡಿಕೆಯ ಶೇ.5ರಷ್ಟು ವಿಷಯಗಳ ಬಗ್ಗೆ ಮಾತ್ರ ಚರ್ಚಿಸಲಾಗಿದೆ. ಈ ಸಭೆಯಲ್ಲಿ ತಮ್ಮ ಬೇಡಿಕೆ ಈಡೇರದಿದ್ದರೆ ಹರ್ಯಾಣದಲ್ಲಿ ಪೆಟ್ರೋಲ್ ಬಂಕ್ ಮತ್ತು ಮಾಲ್ ಗಳನ್ನು ಬಂದ್ ಮಾಡುವ ದಿನಾಂಕ ಘೋಷಣೆ ಮಾಡಬೇಕಾಗುತ್ತದೆ.
ಸಿಂಗು ಗಡಿ ಪ್ರತಿಭಟನಾ ಸ್ಥಳದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡರು, 'ಜನವರಿ 4 ರ ಸರ್ಕಾರದ ಸಭೆಯು ಅಸ್ತವ್ಯಸ್ತತೆಯನ್ನು ಕೊನೆಗೊಳಿಸಲು ವಿಫಲವಾದರೆ, ಹರಿಯಾಣದ ಎಲ್ಲಾ ಮಾಲ್‌ಗಳು, ಪೆಟ್ರೋಲ್ ಪಂಪ್‌ಗಳನ್ನು ಮುಚ್ಚುವ ದಿನಾಂಕಗಳನ್ನು ನಾವು ಪ್ರಕಟಿಸುತ್ತೇವೆ' ಎಂದು ರೈತ ಮುಖಂಡ ವಿಕಾಸ್ ಹೇಳಿದರು. ಇದೇ ವೇಳೆ ಮಾತನಾಡಿದ ಸ್ವರಾಜ್ ಭಾರತದ ಮುಖಂಡ ಯೋಗೇಂದ್ರ ಯಾದವ್ ಅವರು, ಹರಿಯಾಣ-ರಾಜಸ್ಥಾನ ಗಡಿಯಲ್ಲಿರುವ ಶಹಜಹಾನ್‌ಪುರದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ರಾಷ್ಟ್ರ ರಾಜಧಾನಿಯತ್ತ ಸಾಗಲಿದ್ದಾರೆ ಎಂದು ಹೇಳಿದ್ದಾರೆ.
ಮುಂದಿನ ಸುತ್ತಿನ ಮಾತುಕತೆಯಲ್ಲಿ ಯಾವುದೇ ದೃಢ ನಿರ್ಧಾರ ತೆಗೆದುಕೊಳ್ಳದಿದ್ದರೆ ಜನವರಿ 6 ರಂದು ಟ್ರ್ಯಾಕ್ಟರ್ ಮೆರವಣಿಗೆ ನಡೆಸಲಾಗುವುದು ಎಂದು ಮತ್ತೊಬ್ಬ ನಾಯಕ ಯುಧುವೀರ್ ಸಿಂಗ್ ಹೇಳಿದ್ದಾರೆ.