ತಿರುವನಂತಪುರ: ಜನವರಿ 5 ರಿಂದ ರಾಜ್ಯದಲ್ಲಿ ಚಿತ್ರಮಂದಿರಗಳನ್ನು ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು. ಪೂಜಾ ಸ್ಥಳಗಳು ಮತ್ತು ಸಂಬಂಧಿತ ಕಾರ್ಯಕ್ರಮಗಳಿಗೆ, ಹಬ್ಬಗಳನ್ನು ಆಚರಿಸಲು ಜನವರಿ 5 ರಿಂದ ಅನುಮತಿಸಲಾಗುವುದು.
ಹೊಸ ವರ್ಷದ ಮೊದಲ ದಿನವಾದ ಇಂದು ಹತ್ತು ವಿಶೇಷ ಬದಲಾವಣೆಗಳನ್ನು ಮುಖ್ಯಮಂತ್ರಿಗಳು ಘೋಷಿಸಿದರು. ವೃದ್ಧರು ಸವಲತ್ತು ಪಡೆಯಲು ನೇರವಾಗಿ ಸರ್ಕಾರಿ ಕಚೇರಿಗಳಿಗೆ ಹೋಗಬೇಕಾಗಿಲ್ಲ.ಮನೆಗೆ ನೇರವಾಗಿ ತಲಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಜನವರಿ 10 ರ ಮೊದಲು ತಿಳಿಸಲಾದ ಐದು ಸೇವೆಗಳನ್ನು ಯೋಜನೆಯ ಮೊದಲ ಹಂತದಲ್ಲಿ ಸೇರಿಸಲಾಗುವುದು.
ಆರಂಭಿಕವಾಗಿ ಮಸ್ಟರಿಂಗ್, ಜೀವ ಉಳಿಸುವ ಔಷಧಗಳು, ಜೀವ ಪ್ರಮಾಣಪತ್ರಗಳು, ಸಾಮಾಜಿಕ ಭದ್ರತಾ ಪಿಂಚಣಿ ಅರ್ಜಿಗಳು ಮತ್ತು ಸಿಎಂಡಿಆರ್ಎಫ್ ನೆರವು ಸೇರಿವೆ. ಕ್ರಮೇಣ ಇತರ ಸೇವೆಗಳನ್ನು ಮನೆಯಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಆನ್‌ಲೈನ್‌ನಲ್ಲಿ ಸೇವೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದವರ ಮನೆಗಳಿಗೆ ತೆರಳಿ, ಅರ್ಜಿಯನ್ನು ಬರೆಯಿಸಿ ಹೆಚ್ಚಿನ ವಿವರಗಳಿಗಾಗಿ ಕರೆ ಮಾಡಲಾಗುತ್ತದೆ. ಇದಕ್ಕಾಗಿ ಸ್ವಯಂಸೇವಕರ ಸೇವೆಗಳನ್ನು ಸ್ಥಳೀಯ ಸಂಸ್ಥೆಗಳು ಒದಗಿಸಲಿವೆ.
ಜನರು ಏಕಾಂಗಿಯಾಗಿ ವಾಸಿಸುತ್ತಿರುವ ಮನೆಗಳು, ವಿಕಲಚೇತನರು ಅಥವಾ ದೃಷ್ಟಿ ದೋಷವಿರುವ ಜನರ ಬಗ್ಗೆ ಸ್ವಯಂಸೇವಕರಿಗೆ ಸೂಚಿಸಲಾಗುತ್ತದೆ. ಈ ಮಾಹಿತಿಯನ್ನು ಸರ್ಕಾರಿ ಸಂಸ್ಥೆಗಳಿಗೆ ರವಾನಿಸಲಾಗುತ್ತದೆ. ಯೋಜನೆ ಜನವರಿ 15 ರಿಂದ ಪ್ರಾರಂಭವಾಗಲಿದೆ. ಇದನ್ನು ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಸಂಸ್ಥೆಗಳು ಸಂಯೋಜಿಸುತ್ತವೆ.
ಬಡ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ತಜ್ಞರೊಂದಿಗೆ ಸಂವಹನ ನಡೆಸಲು ವಿಶೇಷ ಕಾರ್ಯಕ್ರಮ ಅಯೋಜಿಸಲಾಗುವುದು. ಮಕ್ಕಳಲ್ಲಿ ಆತ್ಮಹತ್ಯಾ ಪ್ರವೃತ್ತಿಯನ್ನು ಕಡಿಮೆ ಮಾಡಲು ಹೆಚ್ಚಿನ ಶಾಲೆಗಳಲ್ಲಿ ವಿಷಯ ತಜ್ಞ ರನ್ನು ನಿಯೋಜಿಸಲಾಗುವುದು. ಮಕ್ಕಳು ಮತ್ತು ಹದಿಹರೆಯದವರಿಗೆ ಪೌಷ್ಠಿಕಾಂಶವನ್ನು ನೀಡುವ ಯೋಜನೆ ಜಾರಿಗೊಳ್ಳಲಿದೆ.
ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ಮಕ್ಕಳಿಗಾಗಿ ಪ್ರಖ್ಯಾತ ವಿದ್ವಾಂಸರಿಂದ ಆನ್‌ಲೈನ್ ಮೂಲಕ ಮಾರ್ಗದರ್ಶಿ ತರಗತಿ ಆರಂಭಿಸಲಾಗುವುದು. ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅರ್ಥಶಾಸ್ತ್ರಜ್ಞರು ಸೇರಿದಂತೆ ವಿಶ್ವದ ಅತ್ಯುತ್ತಮ ಶಿಕ್ಷಣ ತಜ್ಞರೊಂದಿಗೆ ಸಂವಹನ ನಡೆಸಲು ಅವಕಾಶವಿದೆ. ಆನ್‌ಲೈನ್‌ನಲ್ಲಿ ಉಪನ್ಯಾಸಗಳನ್ನು ಕೇಳಲು ಮತ್ತು ಸಂವಹನ ನಡೆಸಲು ಅವಕಾಶವಿರುತ್ತದೆ.
ಇದು ವಿಕ್ಟರ್ಸ್ ನಂತಹ ಚಾನೆಲ್ ಮೂಲಕ ಪ್ರಸಾರವಾಗಲಿದೆ. ಮೊದಲ ಕಾರ್ಯಕ್ರಮ ಜನವರಿಯಲ್ಲಿ ನಡೆಯಲಿದೆ.
ವಾರ್ಷಿಕ ಆದಾಯ 2.5 ಲಕ್ಷ ರೂ.ಗಿಂತ ಕಡಿಮೆ ಇರುವ ಮತ್ತು ಶ್ಲಾಘನೀಯ ರೀತಿಯಲ್ಲಿ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ 1 ಲಕ್ಷ ರೂ.ಗಳ ವಿದ್ಯಾರ್ಥಿವೇತನ ನೀಡಲಾಗುವುದು. ವಿದ್ಯಾರ್ಥಿವೇತನ 1000 ಜನರಿಗೆ ಒದಗಿಸುವ ಗುರಿ ಇರಿಸಲಾಗಿದೆ. ಒಂದು ಸಾವಿರ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂಪಾಯಿ ವಿದ್ಯಾರ್ಥಿವೇತನ ನೀಡಲಾಗುತ್ತದೆ. ವಿದ್ಯಾರ್ಥಿಯ ವಾರ್ಷಿಕ ಆದಾಯ ಎರಡೂವರೆ ಲಕ್ಷ ರೂಪಾಯಿಗಿಂತ ಕಡಿಮೆ ಇರುವವರಿಗೆ ಮಾತ್ರ ಈ ವಿದ್ಯಾರ್ಥಿವೇತನ ಲಭ್ಯವಾಗಲಿದೆ. ಅಂಕಗಳನ್ನು ಮತ್ತು ಶ್ರೇಣಿಗಳ ಆಧಾರದ ಮೇಲೆ ಫಲಾನುಭವಿಗಳನ್ನು ನಿರ್ಧರಿಸಲಾಗುತ್ತದೆ.
ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ಆನ್‌ಲೈನ್ ಸಹಾಯ ವ್ಯವಸ್ಥೆ ಮಾಡಲಾಗುತ್ತದೆ. ಈ ಬಗ್ಗೆ ಮಾಹಿತಿ ಒದಗಿಸಲು,ದೂರು ದಾಖಲಿಸಲು ಗೌಪ್ಯ ಕಂಟ್ರೋಲ್ ರೂಂ ಸೆಲ್ ರೂಪಿಸಲಾಗುವುದು. ಮಾಹಿತಿದಾರರ ಹೆಸರುಗಳನ್ನು ಬಿಡುಗಡೆ ಮಾಡಲಾಗುವುದಿಲ್ಲ. ಮಾಹಿತಿಗಾಗಿ ಕಚೇರಿಗಳಿಗೆ ಹೋಗಬೇಕಾದ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.