ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಮೊದಲ ಪ್ರಜೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 5,00,100 ದೇಣಿಗೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಎಲ್ಲ ಜಾತಿ, ಧರ್ಮ ಸೇರಿದಂತೆ ಸಮುದಾಯಗಳಿಂದ ಧನ ಸಹಾಯ ಸ್ವೀಕರಿಸಲು ಪ್ರಾರಂಭಿಸಿದ್ದೇವೆ ಎಂದು ವಿಶ್ವ ಹಿಂದೂ ಪರಿಷತ್‌ನ ಹಿರಿಯ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೇಶದ ಮೊದಲ ಪ್ರಜೆ. ಹಾಗಾಗಿ ನಾವು ಈ ದೇಣಿಗೆ ಸಂಗ್ರಹ ಅಭಿಯಾನವನ್ನು ಅವರಿಂದಲೇ ಪ್ರಾರಂಭಿಸುವ ಸಲುವಾಗಿ ಅಲ್ಲಿಗೆ ಹೋಗಿದ್ದೆವು. ರಾಮನಾಥ್ ಕೋವಿಂದ್ ಕುಟುಂಬವನ್ನು ಭೇಟಿಯಾಗಿದ್ದೇವೆ. ಅವರು ₹5,00,100 ದೇಣಿಗೆ ನೀಡಿ ಶುಭಾಶಯಗಳನ್ನು ಕೋರಿದ್ದಾರೆ ಎಂದು ವಿಎಚ್‌ಪಿ ಮುಖಂಡ ಅಲೋಕ್ ಕುಮಾರ್ ತಿಳಿಸಿದರು.
ಮಂದಿರ ನಿರ್ಮಾಣಕ್ಕಾಗಿ ಆರಂಭಿಕ ವೆಚ್ಚ 13 ಕೋಟಿ ರೂ. ಅಂದಾಜಿಸಲಾಗಿದೆ. ಹಾಗಾಗಿ ದೇಣಿಗೆ ಸಂಗ್ರಹಿಸಲು 5,25,000 ಹಳ್ಳಿಗಳಲ್ಲಿ 65,000 ಕುಟುಂಬಗಳನ್ನು ತಲುಪಬೇಕಿದೆ. ಈ ಅಭಿಯಾನವು ದೇಶವನ್ನು ಏಕೀಕರಿಸಲಿದೆ ಎಂದವರು ಅಭಿಪ್ರಾಯಪಟ್ಟರು.
ಏತನ್ಮಧ್ಯೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಹ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಒಂದು ಲಕ್ಷ ರೂ.ಗಳ ದೇಣಿಗೆ ನೀಡಿದ್ದಾರೆ.