ಕಾಸರಗೋಡು: ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಜನರು ಸಂಚರಿಸುತ್ತಿದ್ದ ಬಸ್ ಪಾಣತ್ತೂರು ಎಂಬಲ್ಲಿ ಮನೆಯೊಂದರ ಮೇಲೆ ಪಲ್ಟಿಯಾಗಿ ಕರ್ನಾಟಕದ ಆರು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 25 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಹಲವರ ಸ್ಥಿತಿ ಚಿಂತಾಜನಕವೆಂದು ತಿಳಿದುಬಂದಿದೆ.
ಅಪಘಾತದಲ್ಲಿ ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಮೃತಪಟ್ಟಿರುವರೆಂದು ತಿಳಿದುಬಂದಿದೆ. ಮೃತದೇಹಗಳನ್ನು ಪೂಡಂಕಲ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳುಗಳನ್ನು Pಕಾಞಂಗಾಡ್ ನ ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ.
ಈ ಬಸ್ ಕರ್ನಾಟಕದ ಈಶ್ವರಮಂಗಲಂದಿಂದ ಗಡಿ ಗ್ರಾಮವಾದ ಕರಿಕ್ಕೆ ಚೆತ್ತುಕ್ಕಯಂಗೆ ಪ್ರಯಾಣಿಸುತ್ತಿತ್ತು. ಭಾನುವಾರ ಬೆಳಿಗ್ಗೆ 11.45 ರ ಸುಮಾರಿಗೆ ದುರ್ಘಟನೆ ನಡೆದಿದೆ. ಪಾಣತ್ತೂರು-ಸುಳ್ಯ ರಸ್ತೆಯ ಪಾಣತ್ತೂರಿನಿಂದ 4 ಕಿಲೋಮೀಟರ್ ದೂರದ ಪೆರಿಯಾರಂ ಎಂಬಲ್ಲಿ ನಿಯಂತ್ರಣ ತಪ್ಪಿದ ಬಸ್ ರಸ್ತೆಗಿಂತ ಕೆಳಗೆ ಸಂಚರಿಸಿ ಜೋಸ್ ಎಂಬವರ ಮನೆಯ ಮೇಲಕ್ಕುರುಳಿ ಅಪಘಾತ ಉಂಟಾಯಿತು. ಈ ವೇಳೆ ಮನೆಯಲ್ಲಿ ಯಾರೂ ಇದ್ದಿರಲಿಲ್ಲ ಎಂದು ಪ್ರಾಥಮಿಕ ವರದಿ ತಿಳಿಸಿದ್ದು ಮನೆ ಭಾಗಶಃ ಹಾನಿಗೊಳಗಾಗಿದೆ.
ಬಸ್‍ನಲ್ಲಿ ಸುಮಾರು 60 ಜನರು ಇದ್ದರೆಂದು ಪ್ರಾಥಮಿಕ ಮಾಹಿತಿಯಾಗಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಮೃತರ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.