ಜಿನೆವಾ: ಜಗತ್ತಿನ 60 ರಾಷ್ಟ್ರಗಳಲ್ಲಿ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.
ಈ ಬಗ್ಗೆ ತನ್ನ ಪ್ರಕಟಣೆ ಹೊರಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಬ್ರಿಟನ್‌ನಲ್ಲಿ ಪತ್ತೆಯಾದ ರೂಪಾಂತರಗೊಂಡ ಕೊರೊನಾ ವೈರಸ್ ಈಗ ಜಗತ್ತಿನ ಕನಿಷ್ಠ 60 ರಾಷ್ಟ್ರಗಳಲ್ಲಿ ಹರಡಿದೆ. ಕಳೆದ ಒಂದು ವಾರದಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿರುವ ರಾಷ್ಟ್ರಗಳ ಪಟ್ಟಿಗೆ ಮತ್ತೆ 10 ದೇಶಗಳು ಸೇರ್ಪಡೆಯಾಗಿವೆ ಎಂದು ಹೇಳಿದೆ.
ಜೊತೆಗೆ ಜಗತ್ತಿನಾದ್ಯಂತ ಕೋವಿಡ್‌ನಿಂದಾಗಿ 20 ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಸಾಕಷ್ಟು ಲಸಿಕೆ ಲಭ್ಯವಾಗುವವರೆಗೂ ಹೊಸ ಸ್ವರೂಪದ ಕೊರೊನಾ ವೈರಸ್ ಸೋಂಕು ವ್ಯಾಪಿಸುವುದನ್ನು ತಡೆಯುವುದು ಹೇಗೆ ಎಂದು ವಿಶ್ವದಾದ್ಯಂತ ತಲ್ಲಣ ಸೃಷ್ಟಿಯಾಗಿದೆ. ಬ್ರಿಟನ್ ರೀತಿಯಲ್ಲಿಯೇ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ರೂಪಾಂತರಗೊಂಡ ವೈರಸ್, ಅತಿ ವೇಗವಾಗಿ ಹರಡಬಲ್ಲದಾಗಿದೆ. ಆ ವೈರಸ್ 23 ರಾಷ್ಟ್ರಗಳಲ್ಲಿ ಪತ್ತೆಯಾಗಿರುವುದು ವರದಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ.
ರೂಪಾಂತರಿ ಕೊರೊನಾ ವೈರಸ್ ಗೆ 93 ಸಾವಿರ ಮಂದಿ ಬಲಿ!:
ಹೊಸ ಸ್ವರೂಪದ ಕೊರೊನಾ ವೈರಸ್‌ನಿಂದಾಗಿ ಕಳೆದ ಏಳು ದಿನಗಳಲ್ಲಿ ಜಗತ್ತಿನಾದ್ಯಂತ ಸುಮಾರು 93,000 ಮಂದಿ ಸಾವಿಗೀಡಾಗಿದ್ದರೆ, ಇದೇ ಅವಧಿಯಲ್ಲಿ 47 ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ WHO ಹೇಳಿದೆ.
2020ರ ಡಿಸೆಂಬರ್ ಮಧ್ಯ ಭಾಗದಲ್ಲಿ ಬ್ರಿಟನ್‌ನಲ್ಲಿ ರೂಪಾಂತರಗೊಂಡ ವೈರಸ್ ಪತ್ತೆಯಾಗಿತ್ತು, ಅದು ಮೂಲ ಕೊರೊನಾ ವೈರಸ್‌ಗಿಂತ ಶೇ 50ರಿಂದ ಶೇ 70ರಷ್ಟು ಹೆಚ್ಚು ಪರಿಣಾಮಕಾರಿ. ಎರಡೂ ರೀತಿಯ ರೂಪಾಂತರಗೊಂಡ ವೈರಸ್ ವೇಗವಾಗಿ ಹರಡ ಬಹುದಾಗಿದ್ದರೂ, ಪ್ರಾಣಕ್ಕೆ ಹೆಚ್ಚು ಅಪಾಯಕಾರಿ ಆಗಬಹುದೆಂದು ಪರಿಗಣಿಸಲಾಗಿಲ್ಲ ಎಂದು WHO ಹೇಳಿತ್ತು.
ಪ್ರಸ್ತುತ ಅಭಿವೃದ್ಧಿ ಪಡಿಸಿರುವ ಲಸಿಕೆಯು ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಬಿ117 ವೈರಸ್ ತಡೆಯುವುದರಲ್ಲಿಯೂ ಪರಿಣಾಮಕಾರಿಯಾಗಿದೆ ಎಂದು ಫೈಝರ್ ಮತ್ತು ಜರ್ಮನಿಯ ಬಯೊಎನ್‌ಟೆಕ್ ಸಂಸ್ಥೆಗಳು ಹೇಳಿವೆ. ಈ ವರ್ಷ ಆಗಸ್ಟ್ ಅಂತ್ಯದೊಳಗೆ ಶೇ 70ರಷ್ಟು ವಯಸ್ಕರಿಗೆ ಲಸಿಕೆ ನೀಡುವ ಗುರಿ ಇರುವುದಾಗಿ ಯುರೋಪಿಯನ್ ಒಕ್ಕೂಟ ಹೇಳಿದೆ. ಭಾರತ, ರಷ್ಯಾ ಹಾಗೂ ಯುರೋಪ್‌ನ ಹಲವು ರಾಷ್ಟ್ರಗಳಲ್ಲಿ ಈಗಷ್ಟೇ ಲಸಿಕೆ ಅಭಿಯಾನ ಶುರುವಾಗಿದೆ.