ಕಾಸರಗೋಡು: ಹರಿತ ಕೇರಳಂ ಮಿಷನ್ ಮತ್ತು ಶುಚಿತ್ವ ಕೇರಳಂ ಮಿಷನ್ ನೇತೃತ್ವದಲ್ಲಿ ಹಸುರು ಕಚೇರಿಗಳಿಗೆ ಅರ್ಹತಾಪತ್ರ ವಿತರಣೆ ಸಮಾರಂಭ ಮಂಗಳವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಜರುಗಿತು. ಜಿಲ್ಲೆಯಲ್ಲಿ ಹಸುರು ಕಚೇರಿಗಳಾಗಿರುವ 653 ಸಂಸ್ಥೆಗಳಿಗೆ ಅಭಿನಂದನೆ ಮತ್ತು 100 ಅಂಕಗಳಿಸಿರುವ ಸಂಸ್ಥೆಗಳಿಗೆ ಅರ್ಹತಾಪತ್ರ ವಿತರಣೆ ಈ ವೇಳೆ ನಡೆಯಿತು.
ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಈ ಕಾರ್ಯ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು ಹರಿತ ಕೇರಳಂ ಕಳೆದ ವರ್ಷಗಳಲ್ಲಿ ಚಟುವಟಿಕೆಗಳು ರಾಜ್ಯದ ಮುಖಚರ್ಯೆಯನ್ನೇ ಬದಲಿಸಿದೆ. ತ್ಯಾಜ್ಯ ನಿರ್ವಹಣೆ ವಲಯದಲ್ಲಿ ನೂತನ ಜಾಗೃತಿ ಮತ್ತು ದಿಶೆ ಸೃಷ್ಟಿ ಸಾಧ್ಯವಾಗಿದೆ. ನನ್ನ ತ್ಯಾಜ್ಯ ನನ್ನ ಹೊಣೆ ಎಂಬ ಆಶಯವನ್ನು ರಾಜ್ಯ ದ ಜನತೆ ಸ್ವೀಕರಿಸಿದ್ದಾರೆ. ಸರಕಾರಿ ಕಚೇರಿಗಳ ಈ ಚಟುವಟಿಕೆಗಳು ಜನತೆಗೆ ಮಾದರಿಯಾಗಿವೆ ಎಂದರು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಪ್ರಧಾನ ಭಾಷಣ ಮಾಡಿದರು. ಪಂಚಾಯತ್ ಇಲಾಖೆ ಸಹಾಯಕ ನಿರ್ದೇಶಕ ಧನೇಶ್ ಪ್ರತಿಜ್ಞೆ ತಿಳಿಸಿಕೊಟ್ಟರು.
ಕ್ಲೀನ್ ಕೇರಳಂ ಕಂಪನಿ ಮೆನೆಜರ್ ಮಿಥುನ್ ಅವರು ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಅವರಿಗೆ ಹಸುರು ಕ್ರಿಯಾ ಸೇನೆಗಿರುವ ಚೆಕ್ ಹಸ್ತಾಂತರಿಸಿದರು. ಜಿಲ್ಲೆಯ 22 ಸ್ಥಳೀಯಾಡಳಿತ ಸಂಸ್ಥೆಗಳಿಂದ ಒಂದು ತಿಂಗಳ ಅವಧಿಯಲ್ಲಿ ಸಂಗ್ರಹಿಸಿದ 22013.43 ಕಿಲೋ ಅಜೈವಿಕ ತ್ಯಾಜ್ಯಕ್ಕಾಗಿ 1,68, 822,925 ರೂ.ನ ಚೆಕ್ ನೀಡಲಾಗಿದೆ.
ಕಾಸರಗೊಡು ಜಿಲ್ಲೆಯಲ್ಲಿ ಈ ನಿಟ್ಟಿನಲ್ಲಿ ಒಟ್ಟು 806 ಸರಕಾರಿ ಕಚೇರಿಗಳನ್ನು ತಪಾಸಣೆ ನಡೆಸಲಾಗಿತ್ತು. ಇವುಗಳಲ್ಲಿ 653 ಕಚೇರಿಗಳಿಗೆ ಗ್ರೇಡ್ ಗಳು ಲಭಿಸಿದೆ. 210 ಕಚೇರಿಗಳಿಗೆ "ಎ" ಗ್ರೇಡ್, 17 ಕಚೇರಿಗಳಿಗೆ "ಬಿ"ಗ್ರೇಡ್ ಲಭಿಸಿವೆ. ಜಿಲ್ಲಾ ಮಟ್ಟದಲ್ಲಿ 114 ಸರಕಾರಿ ಕಚೇರಿಗಳಲ್ಲಿ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದಲ್ಲಿ 539 ಕಚೇರಿಗಳಿಗೆ ಗ್ರೇಡ್ ಲಭಿಸಿದೆ. ಈ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 29 ಸಂಸ್ಥೆಗಳಿಗೆ 100 ಅಂಕ ಲಭಿಸಿದೆ.