ನವದೆಹಲಿ: ಮುಂದಿನ ಏಪ್ರಿಲ್ ತಿಂಗಳಲ್ಲಿ ಶಾಲೆಗಳು ಆರಂಭವಾಗಲು ಶೇಕಡಾ 69ರಷ್ಟು ಪೋಷಕರು ಒಲವು ತೋರಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
ದೇಶಾದ್ಯಂತ 19 ಸಾವಿರಕ್ಕೂ ಅಧಿಕ ಪೋಷಕರನ್ನು ಸಮೀಕ್ಷೆಗೊಳಪಡಿಸಲಾಗಿದ್ದು, ಕೋವಿಡ್-19 ಲಸಿಕೆ ಸಿಕ್ಕಿದರೆ ಏಪ್ರಿಲ್ ತಿಂಗಳಲ್ಲಿ ಶಾಲೆ ಪ್ರಾರಂಭಿಸಲಿ ಎಂದು ಶೇಕಡಾ 26ರಷ್ಟು ಪೋಷಕರು ಹೇಳಿದ್ದಾರೆ.
ಈಗಿನ ಕೋವಿಡ್ ಸ್ಥಿತಿಗತಿ ನೋಡಿದರೆ ಏಪ್ರಿಲ್ ನಲ್ಲಿ ಶಾಲೆ ಪ್ರಾರಂಭಿಸಬಹುದು. ಅದಕ್ಕಿಂತ ಮೊದಲು ಮಕ್ಕಳನ್ನು ಕಳುಹಿಸಲು ಭಯವಾಗುತ್ತದೆ. ಮುಂದಿನ ವರ್ಷದ ಶೈಕ್ಷಣಿಕ ತರಗತಿಗಳು ಆರಂಭವಾಗುವುದೇ ಏಪ್ರಿಲ್ ನಂತರವಾಗಿರುವುದರಿಂದ ಆಗ ಶಾಲೆಗಳನ್ನು ಪ್ರಾರಂಭ ಮಾಡಿದರೆ ಸೂಕ್ತವಾಗುತ್ತದೆ. ಇನ್ನು ಶೇಕಡಾ 23ರಷ್ಟು ಪೋಷಕರು ಜನವರಿಯಲ್ಲಿಯೇ ಶಾಲೆಗಳು ಪ್ರಾರಂಭವಾಗಲಿ ಎಂದಿದ್ದಾರೆ ಎಂದು ಸಮೀಕ್ಷೆ ನಡೆಸಿದ ಆನ್ ಲೈನ್ ವೇದಿಕೆ ಲೋಕಲ್ ಸರ್ಕಲ್ಸ್ ಹೇಳಿದೆ.
ಏಪ್ರಿಲ್ ಒಳಗೆ ಕೋವಿಡ್-19 ಲಸಿಕೆ ಲಭ್ಯವಾದರೆ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ ಎಂದು ಶೇಕಡಾ 26ರಷ್ಟು ಪೋಷಕರು ಹೇಳುತ್ತಾರೆ. ಈಗಿನ ಕೋವಿಡ್-19 ಸ್ಥಿತಿಗತಿ ನೋಡಿಕೊಂಡು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಬಗ್ಗೆ ಯೋಚಿಸುತ್ತೇವೆ ಎಂದು ಶೇಕಡಾ 56 ಮಂದಿ ಪೋಷಕರು ಹೇಳುತ್ತಿದ್ದಾರೆ.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೇಶಾದ್ಯಂತ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು. ಕರ್ನಾಟಕ ಸೇರಿದಂತೆ ಬಿಹಾರ, ಅಸ್ಸಾಂ, ಕೇರಳ, ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ, ಜಾರ್ಖಂಡ್, ರಾಜಸ್ತಾನ, ಮಧ್ಯ ಪ್ರದೇಶ, ಸಿಕ್ಕಿಮ್ ಗಳಲ್ಲಿ 9ರಿಂದ 12ನೇ ತರಗತಿಯವರೆಗೆ ಶಾಲಾ ಕಾಲೇಜುಗಳು ಪ್ರಾರಂಭವಾಗಿವೆ.