ನವದೆಹಲಿ: ಉತ್ತರ ಪ್ರದೇಶದಲ್ಲಿ ಹಕ್ಕಿಜ್ವರ ಕಾಣಸಿಕೊಂಡಿದೆ ಎಂದು ಶನಿವಾರ ಕೇಂದ್ರ ಸರ್ಕಾರ ದೃಢಪಡಿಸಿದೆ. ಇದರೊಂದಿಗೆ ದೇಶದ ಒಟ್ಟು ಏಳು ರಾಜ್ಯಗಳಲ್ಲಿ ಹಕ್ಕಿಜ್ವರ ಇರುವುದು ದೃಢಪಟ್ಟಂತಾಗಿದೆ.
ದೆಹಲಿ, ಮಹಾರಾಷ್ಟ್ರ ಹಾಗೂ ಛತ್ತೀಸಗಡ ರಾಜ್ಯಗಳಿಂದ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ಇನ್ನೂ ಬರಬೇಕು.
'ಉತ್ತರ ಪ್ರದೇಶ, ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ ಹಾಗೂ ಗುಜರಾತ್ ರಾಜ್ಯಗಳಲ್ಲಿ ಹಕ್ಕಿಜ್ವರ ಕಂಡುಬಂದಿದೆ. ರೋಗ ಪ್ರಸರಣವಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಈ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ' ಎಂದು ಮೀನುಗಾರಿಕೆ, ಪಶುಪಾಲನೆ ಹಾಗೂ ಹೈನುಗಾರಿಕೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ರೋಗ ಪ್ರಸರಣವಾಗುವುದನ್ನು ತಡೆಯಲು ಕೈಗೊಂಡ ಕ್ರಮಗಳ ಪರಿಶೀಲನೆ, ರೋಗಗ್ರಸ್ತ ಹಕ್ಕಿಗಳ ವಿಲೇವಾರಿ ಮೇಲ್ವಿಚಾರಣೆಗಾಗಿ ಕೇರಳ ಮತ್ತು ಹಿಮಾಚಲ ಪ್ರದೇಶಗಳಿಗೆ ಕೇಂದ್ರದ ತಂಡಗಳನ್ನು ಕಳಿಸಲಾಗಿದೆ ಎಂದೂ ಸಚಿವಾಲಯ ತಿಳಿಸಿದೆ.
ಜಲಚರ ಜೀವಿಗಳು, ಹಕ್ಕಿಗಳ ಮಾರುಕಟ್ಟೆಗಳು, ಪ್ರಾಣಿ ಸಂಗ್ರಹಾಲಯಗಳು, ಕೋಳಿ ಸಾಕಣೆ ಕೇಂದ್ರಗಳ ಮೇಲೂ ನಿಗಾ ಇಡುವಂತೆ ಸೂಚಿಸಲಾಗಿದೆ. ರೋಗದಿಂದಾಗಿ ಸತ್ತ ಹಕ್ಕಿಗಳ ಕಳೇಬರಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆಯೂ ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.