ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ 76ನೇಯ ವಾರ್ಷಿಕೋತ್ಸವವು ಬುಧವಾರ ಸಂಘದ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕøತಿಕ ಅಧ್ಯಯನ ಕೇಂದ್ರದ ಕಲಾಮಂದಿರದಲ್ಲಿ ನಡೆಯಿತು. ಆರಂಭದಲ್ಲಿ ಗಣಪತಿ ಹವನ ಮತ್ತು ಸ್ಥಳ ಸಾನ್ನಿಧ್ಯ ಶ್ರೀ ಗೋಪಾಲಕೃಷ್ಣ ದೇವರ ವಿಶೇಷ ಪೂಜಾರಾಧನೆಯೊಂದಿಗೆ ಈಶ್ವರಿ ಪ್ರಕೃತಿ ಮತ್ತು ದೇವಿಕಾ ಪ್ರಣತಿ ಅವರ ಪ್ರಾರ್ಥನಾಗೀತೆಯೊಂದಿಗೆ ಆರಂಭಗೊಂಡ ಸಭಾರ್ಯಕ್ರಮದಲ್ಲಿ ಸುದೀರ್ಘ ಕಾಲ ಸಂಘವನ್ನು ಮುನ್ನಡೆಸುತ್ತಾ ಬಂದ ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ ಅವರ ದಿವ್ಯ ಚೇತನವನ್ನು ಸ್ಮರಿಸಿ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಮಣಿಯೂರು ಶ್ರೀ ಶಾಸ್ತಾರ ದೇವಸ್ಥಾನದ ಮೊಕ್ತೇಸರ ಊಜಂಪಾಡಿ ನಾರಾಯಣ್ ನಾೈಕ್ ಅವರ ಅಧ್ಯಕ್ಷತೆಯಿಂದ ನಡೆದ ಕಾರ್ಯಕ್ರಮದಲ್ಲಿ ಕಲಾಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ ಮಂಜೇಶ್ವರ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ಮುಂಚೂಣಿಯ ಹಿರಿಯ ಅರ್ಥಧಾರಿ, ಪ್ರವಚನಕಾರ, ಶ್ರೇಷ್ಠ ಅಧ್ಯಾಪಕ ಬರೆ ಕೇಶವ ಭಟ್ಟ ಅವರಿಗೆ ಕೀರಿಕ್ಕಾಡು ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಶಾಲು ಹೊದೆಸಿ ಸನ್ಮಾನಿಸಿ ಹಾರಾರ್ಪಣೆಯೊಂದಿಗೆ ಫಲ ಪುಸ್ತಕ ಕಾಣಿಕೆ ಮತ್ತು ಗೌರವ ಧನದೊಂದಿಗೆ ಪ್ರಶಸ್ತಿ ಮತ್ತು ಅಭಿನಂದನಾ ಫಲಕವನ್ನು ನೀಡಲಾಯಿತು. ಸಂಘದ ಕಾರ್ಯದರ್ಶಿ ವಿಶ್ವವಿನೋದ ಬನಾರಿ ಅವರು ಅಭಿನಂದನಾ ಪತ್ರವನ್ನು ವಾಚಿಸಿದರು.
ಖ್ಯಾತ ವಿದ್ವಾಂಸ ಅರ್ಥಧಾರಿ ಪ್ರಾಂಶುಪಾಲ ವೆಂಕಟರಾಮ ಭಟ್ ಸುಳ್ಯ ಅವರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತು ಮುಂದುವರಿಸುವುದಕ್ಕೂ ಮೊದಲು ಯಕ್ಷಗಾನ ಗುರುಕುಲದ ರೂವಾರಿಯಾಗಿ ಅರ್ಥಗಾರಿಕೆ ಮತ್ತು ಪ್ರಸಂಗ ರಚನೆಗೆ ವಿಶೇಷವಾದ ಕೊಡುಗೆಗಳನ್ನು ಕೊಟ್ಟ ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟ ಅವರ ಹಿರಿಯ ಚೈತನ್ಯದ ಸಂಸ್ಮರಣೆ ಮಾಡಿದರು.
ಬರೆ ಕೇಶವ ಭಟ್ಟರ ಅರ್ಥಗಾರಿಕೆಯ ವಿವಿಧ ಆಯಾಮಗಳನ್ನು ಯಥಾವತ್ತಾಗಿ ಚಿತ್ರಿಸಿ ಅವರು ನೀಡಿದ ಕೊಡುಗೆಗಳ ಪೂರ್ಣಾರ್ಹತೆಯೊಂದಿಗೆ ಅವರಿಗೆ ಕೀರಿಕ್ಕಾಡು ಪ್ರಶಸ್ತಿ ಲಭಿಸುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ಬರೆ ಕೇಶವ ಭಟ್ಟರು ಯಕ್ಷಗಾನ ಕಲೆಯ ಕೀರ್ತಿಪುರುಷ ಕೀರಿಕ್ಕಾಡು ಅವರ ದಿವ್ಯ ಚೈತನ್ಯದ ಸಾನ್ನಿಧ್ಯವಿರುವ ಈ ಪ್ರಶಸ್ತಿ ನನಗೆ ಧನ್ಯತೆಯನ್ನೂ ಸಂತೋಷವನ್ನೂ ಕೊಟ್ಟಿದೆ ಎಂದು ಸಂಘಕ್ಕೆ ಶುಭ ಹಾರೈಸಿದರು. ಸಂಘದ ಹಿರಿಯ ಸದಸ್ಯ ಬೆಳ್ಳಿಪ್ಪಾಡಿ ಸದಾಶಿವ ರೈ ವಂದಿಸಿದರು. ಸದಸ್ಯ ನಾರಾಯಣ ದೇಲಂಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಪ್ಪಯ್ಯ ಮಣಿಯಾಣಿ ಮಂಡೆಕೋಲು, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ, ನಾರಾಯಣ ಪಾಟಾಳಿ ಮಯ್ಯಾಳ, ವಿದ್ಯಾಭೂಷಣ ಪಂಜಾಜೆ, ನಿತೀಶ್ ಕುಮಾರ್ ಎಂಕಣ್ಣಮೂಲೆ ಅವರು ಪುಸ್ತಕ ಮತ್ತು ಸ್ಮರಣಿಕೆಯನ್ನಿತ್ತು ವೇದಿಕೆಯಲ್ಲಿದ್ದ ಗಣ್ಯರನ್ನು ಗೌರವಿಸಿದರು.
ಯಕ್ಷಗಾನ ರಂಗಪ್ರವೇಶ ಮತ್ತು ಯಕ್ಷಗಾನ ಬಯಲಾಟ:
ಬಳಿಕ ನಡೆದ ಅಂಗದ ಸಂಧಾನ ಕಥಾಭಾಗದ ಯಕ್ಷಗಾನ ತಾಳಮದ್ದಳೆ ಅತ್ಯಂತ ಯಶಸ್ವಿಯಾಗಿ ಮೂಡಿಬಂತು. ಹಿಮ್ಮೇಳದಲ್ಲಿ ಭವ್ಯಶ್ರೀ ಕುಲ್ಕುಂದ ಅವರ ಭಾಗವತಿಕೆಗೆ ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ, ಅಪ್ಪಯ್ಯ ಮಣಿಯಾಣಿ ಮಂಡೆಕೋಲು, ವಿಷ್ಣುಶರಣ ಬನಾರಿ ಅವರು ಚೆಂಡೆ ಮದ್ದಳೆ ವಾದನದಲ್ಲಿ ಸಹಕರಿಸಿದರು.
ಅರ್ಥಗಾರಿಕೆಯಲ್ಲಿ ಡಾ.ರಮಾನಂದ ಬನಾರಿ (ಪ್ರಹಸ್ತ) ವೆಂಕಟರಾಮ ಭಟ್ಟ ಸುಳ್ಯ,(ಅಂಗದ) ಬೆಳ್ಳಿಪ್ಪಾಡಿ ಸದಾಶಿವ ರೈ ( ರಾವಣ) ವೆಂಕಟ್ರಮಣ ಮಾಸ್ತರ್ ದೇಲಂಪಾಡಿ,(ಶ್ರೀ ರಾಮ) ರಾಮಣ್ಣ ಮಾಸ್ತರ್ ದೇಲಂಪಾಡಿ(ಸುಗ್ರೀವ) ಅವರು ಪಾತ್ರ ನಿರ್ವಹಿಸಿದರು.
ಸಂಘದ ಕಲಾಮಂದಿರದಲ್ಲಿ ಸರೋಜಿನಿ ವಿಷ್ಣುಶರಣ ಬನಾರಿ ಅವರು ನಿರಂತರವಾಗಿ ನೀಡಿದ ಯಕ್ಷಗಾನ ನೃತ್ಯಗಾರಿಕೆ ಅರ್ಥಗಾರಿಕೆ ತರಬೇತಿಯಿಂದ ಸಿದ್ಧರಾದ 28 ಮಂದಿ ಎಳೆಯ, ಯುವ ಪ್ರತಿಭೆಗಳ ರಂಗಪ್ರವೇಶವು ವೈವಿಧ್ಯಪೂರ್ಣವಾಗಿ ಸಂಪನ್ನಗೊಂಡಿತು. ಯಕ್ಷಗಾನ ಪೂರ್ವರಂಗದ ಬಾಲಗೋಪಾಲ ನಿತ್ಯವೇಷ ಕ್ರಮದೊಂದಿಗೆ ಪರಂಪರೆಯ ದೇವೇಂದ್ರ ಒಡ್ಡೋಲಗವು ಪ್ರಥಮವಾಗಿ ಪ್ರಸ್ತುತಗೊಂಡು ಪೂತನಿ ಸಂಹಾರ, ಶಕಟಾಸುರ ವಧೆ ಪ್ರಸಂಗ ಪ್ರದರ್ಶನದೊಂದಿಗೆ ರಾಣಿ ಶಶಿಪ್ರಭೆಯಲ್ಲಿ ಬರುವ ಸನ್ನಿವೇಶವನ್ನೊಳಗೊಂಡ ಯಕ್ಷಗಾನ ಬಯಲಾಟ ರೂಪಕವು ಮೋಹನ ಮೆಣಸಿನಕಾನ, ನಿತೀಶ್ ಕುಮಾರ್ ಎಂಕಣ್ಣಮೂಲೆ ಅವರ ಭಾಗವತಿಕೆಯಲ್ಲಿ ವಿಷ್ಣುಶರಣ ಬನಾರಿ, ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ, ನಾರಾಯಣ ಪಾಟಾಳಿ ಮಯ್ಯಾಳ, ಕಲ್ಲಡ್ಗ ಗುತ್ತು ರಾಮಯ್ಯ ರೈ ಅವರ ಹಿಮ್ಮೇಳನದಲ್ಲಿ ಪ್ರಸ್ತುತಗೊಂಡಿತು. ಬಳಿಕ ಸಂಘದ ಕಲಾವಿದರೊಂದಿಗೆ ಪ್ರಸಿದ್ಧ ಭಾಗವತ ಹೊಸಮೂಲೆ ಗಣೇಶ ಭಟ್ ಅವರ ಭಾಗವತಿಕೆ ಮತ್ತು ಸಮರ್ಥ ಚೆಂಡೆ ಮದ್ದಳೆ ಹಿಮ್ಮೇಳದೊಂದಿಗೆ ಸುದರ್ಶನ ವಿಜಯ ಯಕ್ಷಗಾನ ಬಯಲಾಟವು ಸಮಯೋಚಿತವಾಗಿ ಪ್ರದರ್ಶಿಸಲ್ಪಟ್ಟಿತು. ವೇಷಧಾರಿಗಳಾಗಿ ಬಾಲಕೃಷ್ಣ ಗೌಡ ದೇಲಂಪಾಡಿ, ಎಂ.ರಾಧಾಕೃಷ್ಣ ರೈ ಮುದಿಯಾರು, ರಮಾನಂದ ರೈ ದೇಲಂಪಾಡಿ, ವೀರಪ್ಪ ನಡುಬೈಲು, ರಾಮ ನಾಯ್ಕ್ ದೇಲಂಪಾಡಿ ಬಸಿರಡ್ಕ, ಎ.ಜಿ.ಮುದಿಯಾರು, ಬಿ.ಹೆಚ್.ವೆಂಕಪ್ಪ ಗೌಡ ಬೆಳ್ಳಿಪ್ಪಾಡಿ, ಎಂ.ಚಂದ್ರಶೇಖರ ರೈ ಮಂಗಳೂರು, ವಿದ್ಯಾಭೂಷಣ ಪಂಜಾಜೆ, ರಜತ್, ರಾಮ ನಾಯ್ಕ್ ದೇಲಂಪಾಡಿ, ಮಾಸ್ಟರ್ ಅಭಿಷೇಕ್ ಕಲ್ಲರ್ಪೆ, ಕು.ಯಶಸ್ವಿನಿ ಅಡ್ಕಾರು, ಕು.ವೀಕ್ಷಿತಾ ಬಂದ್ಯಡ್ಕ, ಕು.ಬಾಸ್ಮಿತಾ ಬೆಳ್ಳಿಪ್ಪಾಡಿ ಅವರು ತಮ್ಮ ಕಲಾ ಪ್ರೌಢಿಮೆಯನ್ನು ತೋರಿಸಿಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮದ ಮೊದಲಿಗೆ ನಂದಕಿಶೋರ ಬನಾರಿ ಸ್ವಾಗತಿಸಿ, ಮಮತಾ ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ವಂದಿಸಿದರು.