ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಹಾಗೂ ಕೇಂದ್ರ ಸರ್ಕಾರದ ನಡುವಿನ 7 ನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿದೆ.
ಜ.04 ರಂದು ನಡೆದ ಸಭೆಯಲ್ಲಿ ಪ್ರತಿಭಟನಾ ನಿರತ ರೈತರ ಮುಖಂಡರು ಕೃಷಿ ಕಾನೂನನ್ನು ಹಿಂಪಡೆಯಬೇಕೆಂಬ ಪಟ್ಟು ಮುಂದುವರೆಸಿದರು. ಇತ್ತ ಹೊಸ ಕಾನೂನಿನಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ಕೇಂದ್ರದ ಮೂವರು ಸಚಿವರು ವಿವರಿಸಿದರು. ಒ ಪರಿಣಾಮ ಯಾವುದೇ ನಿರ್ಣಯ ತೆಗೆದುಕೊಳ್ಳದೇ ಸಭೆ ಅಂತ್ಯಗೊಂಡಿದೆ.
ಒಂದು ಗಂಟೆಯ ಚರ್ಚೆಯ ಬಳಿಕ ದೀರ್ಘಾವಧಿ ವಿರಾಮ ತೆಗೆದುಕೊಂಡ ರೈತರು, ತಾವು ಲಂಗರ್ (ಕಮ್ಯುನಿಟಿ ಕಿಚನ್) ನಿಂದ ತರಿಸಿಕೊಂಡಿದ್ದ ಆಹಾರವನ್ನು ಸೇವಿಸಿದರು. ಆದರೆ ಕಳೆದ ಬಾರಿಯಂತೆ (ಡಿ.30 ರ ಸಭೆ) ಈ ಬಾರಿ ಕೇಂದ್ರ ಸಚಿವರು-ರೈತರು ಒಟ್ಟಿಗೆ ಆಹಾರ ಸೇವಿಸಲಿಲ್ಲ. ಅಷ್ಟೇ ಅಲ್ಲದೇ ವಿರಾಮದ ವೇಳೆ ರೈತ ಮುಖಂಡರು, ಕೇಂದ್ರ ಸಚಿವರು ಪ್ರತ್ಯೇಕವಾಗಿ ತಮ್ಮ ತಮ್ಮಲ್ಲೇ ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದ್ದು ವಿಶೇಷವಾಗಿತ್ತು.
ಸುದೀರ್ಘ ವಿರಾಮದ ನಂತರ ಉಭಯ ಪಕ್ಷಗಳ ನಾಯಕರೂ ಸಂಜೆ 5.15 ಕ್ಕೆ ಮಾತುಕತೆ ಪುನಾರಂಭ ಮಾಡಿದರು. ಈ ಸಭೆ ಕೇಂದ್ರದ ಕಾನೂನುಗಳನ್ನು ಹಿಂಪಡೆಯುವ ರೈತರ ಬೇಡಿಕೆ ಕೇಂದ್ರಿತವಾಗಿದ್ದ ಪರಿಣಾಮ ಯಾವುದೇ ನಿರ್ಣಯ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ.
"ಸರ್ಕಾರ ಆಂತರಿಕವಾಗಿ ಸಮಾಲೋಚನೆ ನಡೆಸಿ ನಂತರ ರೈತರ ಒಕ್ಕೂಟಕ್ಕೆ ತಿಳಿಸಲಿದೆ" ಎಂದು ಸಚಿವರು ಹೇಳಿದ್ದಾಗಿ ರೈತ ಮುಖಂಡರು ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ ಜ.05 ರಂದು ರೈತ ಒಕ್ಕೂಟದ ಆಂತರಿಕ ಸಭೆ ನಡೆಯಲಿದ್ದು, ರೈತರ ಮುಂದಿನ ನಡೆಯ ಬಗ್ಗೆ ತೀರ್ಮಾನವಾಗುವ ಸಾಧ್ಯತೆ ಇದೆ. ಜ.04 ರ ಸಭೆಯಲ್ಲಿ ರೈತರ ಪ್ರಮುಖ ಬೇಡಿಕೆಗಳಾದ ಎಂಎಸ್ ಪಿ ಬಗ್ಗೆಯೂ ಚರ್ಚೆಯಾಗದೇ ಇದ್ದದ್ದು ಮತ್ತೊಂದು ವಿಶೇಷ.