ತಿರುವನಂತಪುರ: ಕೋವಿಡ್ ನಿಯಂತ್ರಣ ಮಾನದಂಡಗಳನ್ನು ಕಠಿಣವಾಗಿ ಪಾಲಿಸಿ ಶಾಲೆಗಳು ಪುನರಾರಂಭಗೊಂಡಿದ್ದು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇರಳ ಸ್ಟೇಟ್ ಡ್ರಗ್ಗರ್ಸ್ ಆಂಡ್ ಪಾರ್ಮಸೂಟಿಕಲ್ಸ್ (ಕೆಎಸ್‍ಡಿಪಿ) 83,000 ಲೀಟರ್ ಸ್ಯಾನಿಟೈಜರ್ ನೀಡಲಿದೆ. ತಿರುವನಂತಪುರದಿಂದ ಕಾಸರಗೋಡಿನ ವರೆಗಿನ 4402 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸ್ಯಾನಿಟೈಜರ್ ವಿತರಿಸಲಾಗುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪಡೆದ ಆದೇಶದ ಪ್ರಕಾರ ಸ್ಯಾನಿಟೈಜರ್ ಒದಗಿಸಲಾಗುತ್ತದೆ.
ಆಲಪ್ಪುಳ, ತಿರುವನಂತಪುರ, ಕೊಟ್ಟಾಯಂ, ತ್ರಿಶೂರ್, ವಯನಾಡ್ ಜಿಲ್ಲೆಗಳಲ್ಲಿ ವಿತರಣೆ ಪ್ರಾರಂಭವಾಗಿದೆ. ಕಾಸರಗೋಡು, ಕೋ ಝಿಕ್ಕೋಡ್, ಕಣ್ಣೂರು, ಕೊಲ್ಲಂ ಮತ್ತು ಪತ್ತನಂತಿಟ್ಟು ಜಿಲ್ಲೆಗಳಲ್ಲಿ ಇಂದಿನಿಂದ(ಸೋಮವಾರ) ವಿತರಣೆ ಪ್ರಾರಂಭವಾಗಲಿದೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರದ ನಿರ್ದೇಶನದ ಬಳಿಕ ಕೆಎಸ್‍ಡಿಪಿ ಸ್ಯಾನಿಟೈಜರ್ ಉತ್ಪಾದನೆಯನ್ನು ಪ್ರಾರಂಭಿಸಿತ್ತು. ಕೆಎಸ್‍ಡಿಪಿ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ ಸ್ಯಾನಿಟೈಜರ್ ನ್ನು ಕಡಿಮೆ ಬೆಲೆಗೆ ಬಿಡುಗಡೆ ಮಾಡಿತ್ತು. ಇದರೊಂದಿಗೆ, ಸಾಮಾನ್ಯ ಮಾರುಕಟ್ಟೆಯಲ್ಲಿ ಸ್ಯಾನಿಟೈಜರ್ ಬೆಲೆಯನ್ನು ನಿಯಂತ್ರಿಸಲು ಸಾಧ್ಯವಾಯಿತು. ಕೆಎಸ್ಡಿಪಿ ಸ್ಥಳೀಯ ಚುನಾವಣೆಗಳಲ್ಲಿ ಮತದಾನ ಕೇಂದ್ರಗಳಿಗೆ ಅಗತ್ಯವಾದ ಸ್ಯಾನಿಟೈಜರ್ ನ್ನು ತಯಾರಿಸಿ ನೀಡಿತ್ತು. 2.5 ಲಕ್ಷ ಲೀಟರ್ ಸ್ಯಾನಿಟೈಜರ್ ಅನ್ನು ಚುನಾವಣಾ ಆಯೋಗಕ್ಕಾಗಿ ಕಳವೂರಿನ ಕಾರ್ಖಾನೆಯಲ್ಲಿ ತಯಾರಿಸಲಾಗಿತ್ತು.
ಕೆಎಸ್‍ಡಿಪಿ ರಾಜ್ಯದ ಆರೋಗ್ಯ ಕ್ಷೇತ್ರಕ್ಕೆ ಅಗತ್ಯವಾದ ಸ್ಯಾನಿಟೈಜರ್‍ಗಳನ್ನು ಸಹ ತಯಾರಿಸುತ್ತದೆ. ಸ್ಯಾನಿಟೈಜರ್ ನ್ನು ಆರಂಭದಲ್ಲಿ ಅರ್ಧ ಲೀಟರ್ ಬಾಟಲಿಯಲ್ಲಿ ಬಿಡುಗಡೆ ಮಾಡಲಾಯಿತು. ಇದು ಈಗ 250, 200 ಮತ್ತು 100 ಮಿಲ್ಲಿ ಮತ್ತು ಐದು ಲೀಟರ್ ಬಾಟಲಿಗಳಲ್ಲಿ ಲಭ್ಯವಿದೆ. ಈ ಪಿಎಸ್‍ಯುನಲ್ಲಿ ಈವರೆಗೆ 20 ಲಕ್ಷ ಸ್ಯಾನಿಟೈಜರ್‍ಗಳನ್ನು ಉತ್ಪಾದಿಸಲಾಗಿದೆ. ಇದು 51.88 ಕೋಟಿ ರೂ.ಗಳ ವ್ಯವಹಾರ ನಡೆಸಿದೆ. ವೈವಿಧ್ಯೀಕರಣದ ಮೂಲಕ ಕೆಎಸ್‍ಡಿಪಿ ಉತ್ತಮ ಪ್ರಗತಿ ಸಾಧಿಸುತ್ತಿದೆ. ಕೋವಿಡ್ ನ ಬಳಿಕ ಶುಕ್ರವಾರ ಮತ್ತೆ ಶಾಲೆಗಳು ಆರಂಭಗೊಂಡಿವೆ. ಮೊದಲ ಹಂತದಲ್ಲಿ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಪ್ರಾರಂಭಿಸಲಾಗಿದೆ.