ನವದೆಹಲಿ: ಕೋವಿಡ್-19 ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಬಿದ್ದಿದ್ದು, ರಾಜ್ಯಗಳ ತೆರಿಗೆ ಸಂಗ್ರಹದಲ್ಲೂ ಕುಸಿತ ಕಂಡಿದೆ.
ಪರಿಣಾಮ ಈ ವರ್ಷ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ರಾಜ್ಯಗಳಿಗೆ ಆದಾಯ ಕೊರತೆ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ತನ್ನ ವರದಿಯಲ್ಲಿ ತಿಳಿಸಿದೆ. ಈ ಮೂಲಕ ರಾಜ್ಯಗಳ ಜಿಎಫ್ ಡಿ (gross fiscal deficit) 8.7 ಲಕ್ಷ ಕೋಟಿ ಅಥವಾ ಜಿಎಸ್ ಡಿಪಿಯ ಶೇ.4.7 ರಷ್ಟು ವಿಸ್ತರಣೆಯಾಗಲಿದೆ ಎಂದು ಕ್ರಿಸಿಲ್ ತನ್ನ ವರದಿಯಲ್ಲಿ ತಿಳಿಸಿದೆ.
ತೆರಿಗೆ ಸಂಗ್ರಹ ಕ್ರಮೇಣವಾಗಿ ಸುಧಾರಣೆ ಕಾಣುವ ಸಾಧ್ಯತೆ ಇದ್ದರೂ, ರಾಜ್ಯಗಳಿಗೆ ಆದಾಯ ಕೊರತೆಯ ಸಮಸ್ಯೆಯನ್ನು ತಂದೊಡ್ಡಲಿದ್ದು ದೀರ್ಘಾವಧಿಯಲ್ಲಿ ಸಾಲದ ಅಪಾಯಗಳಿಗೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಈಗಾಗಲೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಖರ್ಚು ಹಾಗೂ ಅಗತ್ಯತೆಗಳನ್ನು ಪೂರೈಸುವುದಕ್ಕಾಗಿ ಸಾಲ ಮಾಡಲು ಹೆಚ್ಚುವರಿ ಅವಕಾಶ ಒದಗಿಸಿದ್ದು, ಸಾಲದ ಮಿತಿಯನ್ನು ಈ ಹಿಂದಿದ್ದ ಜಿಎಸ್ ಡಿಪಿಯ ಶೇ.2 ರಿಂದ ಶೇ.3 ಕ್ಕಿಂತ ಹೆಚ್ಚು ಪಟ್ಟು ಸಾಲ ಮಾಡಲು ಅವಕಾಶ ನೀಡಲಾಗಿದೆ. ಇದು ರಾಜ್ಯಗಳಿಗೆ ಸಾಲದ ಹೊರೆಯನ್ನು ಹೆಚ್ಚಿಸುತ್ತದೆ. 18 ರಾಜ್ಯಗಳಲ್ಲಿ ನಡೆದ ಅಧ್ಯಯನದಿಂದ ಕ್ರಿಸಿಲ್ ಈ ವರದಿಯನ್ನು ಪ್ರಕಟಿಸಿದೆ.