ಬೀಜಿಂಗ್: ಚೀನಾ ದೇಶಾದ್ಯಂತ ಕೊರೋನಾವೈರಸ್ ಸೋಂಕು ಹರಡುವಿಕೆ ತಪ್ಪಿಸುವ ದೃಷ್ಟಿಯಿಂದ ಈವರೆಗೂ 9 ಮಿಲಿಯನ್ ಡೋಸ್ ಕೊರೋನಾವೈರಸ್ ಲಸಿಕೆಗಳನ್ನು ಹಾಕಿರುವಂತೆಯೇ, ನೆರೆಯ ಹೆಬ್ರಿ ಪ್ರಾಂತ್ಯದಲ್ಲಿ ದಿಢೀರನ್ನೆ ಕಾಣಿಸಿಕೊಂಡ ಕೋವಿಡ್-19 ಪ್ರಕರಣದ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಶನಿವಾರ ಹೊಸದಾಗಿ 33 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಪೈಕಿ 17 ಜನರು ಸ್ಥಳೀಯರಾದರೆ, ಉಳಿದವರು ಹೊರಗಿನಿಂದ ಬಂದವರಾಗಿದ್ದಾರೆ. ಉತ್ತರ ಚೀನಾ ಹೆಬ್ರಿ ಪ್ಯಾಂತ್ಯದಲ್ಲಿ 14 ಸ್ಥಳೀಯವಾಗಿ ಹರಡಿರುವ ಪ್ರಕರಣಗಳಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಕಮೀಷನ್ ಹೇಳಿದೆ.
ಮಾರ್ಚ್ 5ರಿಂದ ಆರಂಭವಾಗಲಿರುವ ವಾರ್ಷಿಕ ಸಂಸತ್ ಅಧಿವೇಶನಕ್ಕೆ ದೇಶದ ಉನ್ನತ ನಾಯಕರು ಸಿದ್ಧರಾಗುತ್ತಿರುವಂತೆಯೇ, ಹೆಬ್ರಿಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳ ರಾಜಧಾನಿ ಬೀಜಿಂಗ್ ಗೆ ಎಚ್ಚರಿಕೆಯ ಸಂದೇಶ ನೀಡಿದೆ. ಸಂಸತ್ ಅಧಿವೇಶನದ ವೇಳೆಯಲ್ಲಿ ಸುಮಾರು 5 ಸಾವಿರ ಶಾಸಕರು, ಸಲಹೆಗಾರರು ಪಾಲ್ಗೊಳ್ಳಲಿದ್ದಾರೆ.
ಮಾರ್ಚ್ 5ರಿಂದ ಆರಂಭವಾಗಿರುವ ಎರಡು ವಾರಗಳ ಕಾಲದ ಸಭೆಗೆ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ಮತ್ತು ಚೀನಾ ಪೀಪಲ್ಸ್ ಪೊಲಿಟಿಕಲ್ ಕಾನ್ಸಲೇಟಿವ್ ಕಾನ್ಫರೆನ್ಸ್ ಪಕ್ಷದ ಶಾಸಕರು ಸಜ್ಜಾಗಿದ್ದಾರೆ. ವಿದೇಶದಿಂದ ಬರುವ ಜನರಿಗಾಗಿ 21 ದಿನಗಳ ಕಾಲ ಕ್ವಾರಂಟೈನ್ ನನ್ನು ಚೀನಾ ಈಗಾಗಲೇ ಪ್ರಕಟಿಸಿದೆ.
ಒಟ್ಟಾರೇ ಹೆಬ್ರಿಯಲ್ಲಿ 476 ಸ್ಥಳೀಯವಾಗಿ ಮತ್ತು 36 ಹೊರಗಡೆಯಿಂದ ಸೋಂಕು ಬಂದಿರುವುದು ದೃಢಪಟ್ಟಿದ್ದು, ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಅವರ ಸಲಹೆ ಮೇರೆಗೆ ಉಪಾಧ್ಯಕ್ಷ ಸನ್ ಚುಂಲಾನ್ ಪ್ರಾಂತ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನೇಕ ಸ್ಥಳೀಯ ಆರೋಗ್ಯಾಧಿಕಾರಿಗಳನ್ನು ಈಗಾಗಲೇ ವಜಾ ಮಾಡಲಾಗಿದೆ.
ಕೋವಿಡ್-19 ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ನಗರದಲ್ಲಿನ ಎಲ್ಲಾ ಸ್ಥಳೀಯ ನಿವಾಸಿಗಳು ಏಳು ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿರುವುದಾಗಿ ಅಗತ್ಯವಾಗಿರುವುದಾಗಿ ಅಧಿಕೃತ ಮಾಧ್ಯಮ ವರದಿಗಳು ತಿಳಿಸಿವೆ.
ಶುಕ್ರವಾರದ ಮಾಹಿತಿಯಂತೆ ಒಟ್ಟಾರೇ, ಚೀನಾದಲ್ಲಿ ಪ್ರಕರಣಗಳ ಸಂಖ್ಯೆ 87,364ಕ್ಕೆ ಏರಿಕೆಯಾಗಿದ್ದು, 4,634 ಜನರು ಮೃತಪಟ್ಟಿದ್ದಾರೆ. ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಲಸಿಕೆಯನ್ನು ತೀವ್ರಗೊಳಿಸಲಾಗಿದೆ. ಚೀನಾದಲ್ಲಿ 9 ಮಿಲಿಯನ್ ಡೋಸ್ ಕೋವಿಡ್ -19 ಲಸಿಕೆ ಹಾಕಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ಉಪ ಮುಖ್ಯಸ್ಥ ಜೆಂಗ್ ಯಿಕ್ಸಿನ್ ತಿಳಿಸಿದ್ದಾರೆ.