ನವದೆಹಲಿ: ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ಧ ಕಳೆದೊಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರು, ಹೊಸ ವರ್ಷವನ್ನು ಆಚರಿಸುವ ಯಾವುದೇ ಸಂಭ್ರಮದಲ್ಲಿಲ್ಲ. ಕೇಂದ್ರ ಸರ್ಕಾರವು ನಮ್ಮ ಬೇಡಿಕೆಗಳನ್ನು ಈಡೇರಿಸುವ ವರೆಗೂ ನಮಗೆ ಹೊಸ ವರ್ಷವಿಲ್ಲ ಎಂದು ಹೇಳಿದ್ದಾರೆ.
ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿ-ಹರಿಯಾಣ ಗಡಿ ಪ್ರದೇಶದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳುವ ವರೆಗೂ ಹೊಸ ವರ್ಷಾಚರಣೆಯಿಲ್ಲ ಎಂದು ನವೆಂಬರ್ 25ರಿಂದ ದೆಹಲಿ-ಹರಿಯಾಣ ಗಡಿಯಲ್ಲಿ ಬೀಡು ಬಿಟ್ಟು ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ಮೂಲದ ರೈತ ಹರ್ಜಿಂದರ್ ಸಿಂಗ್ ಹೇಳಿಕೆ ನೀಡಿದರು.
ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ಬುಧವಾರ ನಡೆದ ಆರನೇ ಸುತ್ತಿನ ಮಾತುಕತೆಯೂ ಅಪೂರ್ಣಗೊಂಡಿದೆ. ವಿದ್ಯುತ್ ದರ ಏರಿಕೆ ಹಾಗೂ ಕೃಷಿತ್ಯಾಜ್ಯ ಸುಟ್ಟರೆ ರೈತರಿಗೆ ದಂಡ ವಿಧಿಸುವ ವಿಚಾರಗಳಲ್ಲಿ ಒಮ್ಮತ ಮೂಡಿದೆ. ಆದರೆ ವಿವಾದಿತ ಕೃಷಿ ಕಾಯ್ದೆ ಹಾಗೂ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ಸಂಬಂಧ ರೈತರ ಬೇಡಿಕೆಗಳಿಗೆ ಪರಿಹಾರ ದೊರಕಿಲ್ಲ.
ಅವರು ಒಪ್ಪಿದ ಎರಡೂ ಬೇಡಿಕೆಗಳು ಇನ್ನೂ ಕಾನೂನುಗಳಾಗಿಲ್ಲ. ನಾವು ಬೇಡಿಕೆ ಹಾಗೂ ಸ್ಪಷ್ಟತೆಯೊಂದಿಗೆ ಸರ್ಕಾರದ ಬಳಿ ತೆರಳಿದೆವು. ಸರ್ಕಾರಕ್ಕೆ ಸೂಕ್ತವಾದದ್ದನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಅವರು ನಮ್ಮೆಲ್ಲ ಬೇಡಿಕೆಗಳನ್ನು ಆಲಿಸಬೇಕು ಎಂದು ಪಂಜಾಬ್ ಹೋಶಿಯಾರ್ ಪುರದ ರೈತ ಹರ್ಮೇಶ್ ಹೇಳಿದರು.
ಸರ್ಕಾರ ನಮ್ಮ ಶಕ್ತಿಯನ್ನು ನೋಡಲು ಬಯಸುವುದಾದರೆ ನಾವದನ್ನು ಅವರಿಗೆ ತೋರಿಸುತ್ತೇವೆ. ದೊಡ್ಡ ಮನೆಗಳಲ್ಲಿ ವಾಸಿಸುವ ನಮ್ಮಂತಹ ಜನರೀಗ ರಸ್ತೆಯಲ್ಲಿ ಮಲಗಿದ್ದಾರೆ. ನಾವು ಒಂದು ತಿಂಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಬೇಕಿದ್ದರೆ ಇನ್ನೂ ಒಂದು ವರ್ಷವೂ ಪ್ರತಿಭಟನೆ ಮುಂದುವರಿಸಬಹುದು ಎಂದು ಭೂಪಿಂದರ್ ಸಿಂಗ್ ಹೇಳಿದರು.
ನಮಗೆ ಕುಟುಂಬವಿದೆ. ಅವರಿಂದ ದೂರವಿರುವುದು ನೋವಿನ ವಿಚಾರ. ಆದರೆ ಇವರೂ ನಮ್ಮ ಕುಟುಂಬವೇ ಆಗಿದ್ದಾರೆ. ಈ ಎಲ್ಲ ರೈತರು ನಮ್ಮ ಸಹೋದರರಾಗಿದ್ದಾರೆ ಎಂದು ಹರ್ಜಿಂದರ್ ಹೇಳಿದರು.