ತಿರುವನಂತಪುರ: ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಚುತಾನಂದನ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ಆರೋಗ್ಯ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಿಪಿಎಂ ಹಿರಿಯ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಚುತಾನಂದನ್ ತಿಳಿಸಿದ್ದಾರೆ.
ಆರೋಗ್ಯ ಕಾರಣಗಳಿಂದಾಗಿ ಆಯೋಗದ ಅಧ್ಯಕ್ಷರಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ತಿಳಿಸಿರುವ ಅವರು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ವೈದ್ಯರ ಕಟ್ಟುನಿಟ್ಟಿನ ಷರತ್ತುಗಳಿಗೆ ಒಳಪಟ್ಟಿರುವುದರಿಂದ ಸಭೆಗಳನ್ನು ನಡೆಸಲು ಅಥವಾ ಚರ್ಚೆಗಳನ್ನು ನಡೆಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಇಂದಿನಿಂದ(ಭಾನುವಾರ) ರಾಜೀನಾಮೆ ನೀಡುವುದಾಗಿ ನಾನು ಸರ್ಕಾರಕ್ಕೆ ಮಾಹಿತಿ ನೀಡಿದ್ದೇನೆ ಎಂದು ಅಚ್ಚುತಾನಂದನ್ ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿದ್ದ ಅವರು ಹನ್ನೊಂದು ಅಧ್ಯಯನ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ರಾಜ್ಯಾದ್ಯಂತ ಪ್ರಯಾಣಿಸಿ ಜನರೊಂದಿಗೆ ಸಂವಹನ ನಡೆಸಿ ಹಲವಾರು ವಿಚಾರ ಸಂಕಿರಣಗಳು ಮತ್ತು ಸಭೆಗಳನ್ನು ನಡೆಸುವ ಮೂಲಕ ಇದನ್ನು ತಯಾರಿಸಲಾಗಿದೆ ಎಂದು ವಿ.ಎಸ್.ತಿಳಿಸಿದ್ದಾರೆ.
ಸಭೆಗಳ ಮೂಲಕ ಕ್ರೋಡೀಕರಿಸಿದ ವರದಿಗಳನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಿದಾಗ ವರದಿಗಳು ರೂಪುಗೊಂಡವು. ಇನ್ನೂ ಎರಡು ವರದಿಗಳನ್ನು ಸಿದ್ಧಪಡಿಸಲಾಗಿದೆ. ಮುದ್ರಣ ಕಾರ್ಯಗಳು ಪೂರ್ಣಗೊಂಡ ಬಳಿಕ ಅದನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಆಶಾವಾದವನ್ನೂ ವಿ.ಎಸ್.ಹಂಚಿಕೊಂಡಿರುವರು.
ಸರ್ಕಾರ ಜಾರಿಗೊಳಿಸುವ ಯೋಜನೆಗಳ ಮೌಲ್ಯವನ್ನು ವರದಿ ಸಲ್ಲಿಕೆಯಲ್ಲಿ ಸೂಚಿಸಲಾದ ಮೌಲ್ಯಗಳ ಹಿನ್ನೆಲೆಯಲ್ಲಿ ಆಯೋಗವು ನಿಶ್ಚಯಿಸುತ್ತದೆ. ಈ ಹಿಂದೆಯೇ ವಿ.ಎಸ್. ಅವರು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ವರದಿಯಾಗಿತ್ತು. ಅವರು ಇತ್ತೀಚೆಗೆ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದರು.