ಕಾಸರಗೋಡು: ಪ್ರೆಸ್‍ಕ್ಲಬ್ ಸ್ಥಾಪಕ ಪದಾಧಿಕಾರಿಗಳಲ್ಲಿ ಒಬ್ಬರಾದ ಕೃಷ್ಣನ್ ಸಂಸ್ಮರಣೆ ಹಾಗೂ ಕೃಷ್ಣನ್ ಸ್ಮಾರಕ ಮಾಧ್ಯಮ ಪುರಸ್ಕಾರ ವಿತರಣಾ ಸಮಾರಂಭ ಕಾಸರಗೋಡು ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ಬುಧವಾರ ಜರುಗಿತು. ತೃಕ್ಕರಿಪುರ ಶಾಸಕ ಎಂ. ರಾಜಗೋಪಾಲನ್ ಸಮಾರಂಭ ಉದ್ಘಾಟಿಸಿದರು. ಎ. ಅಬ್ದುಲ್ ರಹಮಾನ್ ಸಂಸ್ಮರಣಾ ಭಾಷಣ ಮಾಡಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸ್ಥಳೀಯ ಮಾಧ್ಯಮ ಪುರಸ್ಕಾರಕ್ಕೆ ಆಯ್ಕೆಯಾದ ಪತ್ರಕರ್ತ ವಿ.ಇ ಉಣ್ಣಿಕೃಷ್ಣನ್ ಅವರಿಗೆ ಶಾಸಕ ಎಂ. ರಾಜಗೋಪಾಲನ್ ಸ್ಮರಣಿಕೆ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಿದರು.
ಕೃಷ್ಣನ್ ಸ್ಮಾರಕ ಪುರಸ್ಕಾರವನ್ನು ಗ್ರಾಮೀಣ ವರದಿಗಾರಿಕೆಗಾಗಿ ನೀಡಲಾಗುತ್ತಿದ್ದು, ಉಣ್ಣಿಕೃಷ್ಣನ್ ಅವರು ಎಣ್ಮಕಜೆ ಪಂಚಾಯಿತಿಯ ಕಜಂಪಾಡಿ ಕಾಲನಿಯ ಸಮಸ್ಯೆಗಳ ಬಗ್ಗೆ ತಯಾರಿಸಿದ ವಿಶೇಷ ವರದಿಯನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿತ್ತು. ಪ್ರೆಸ್‍ಕ್ಲಬ್ ಕಾರ್ಯದರ್ಶಿ ಪದ್ಮೇಶ್ ಕೆ.ವಿ ಸ್ವಾಘತಿಸಿದರು. ಪ್ರದೀಪ್ ನಾರಾಯಣ್ ಸನ್ಮಾನಪತ್ರ ವಾಚಿಸಿದರು. ಶೈಜು ಪಿಲಾತ್ತರ ವಂದಿಸಿದರು.
ಹಿರಿಯ ಪತ್ರಕರ್ತರಾದ ವಿ.ವಿ ಪ್ರಭಾಕರನ್, ಸನ್ನಿಜೋಸೆಫ್ ಹಾಗೂ ಜಯಕೃಷ್ಣನ್ ನರಿಕುಟ್ಟಿ ಅವರನ್ನೊಳಗೊಂಡ ಜ್ಯೂರಿ ಸಮಿತಿ ಉಣ್ಣಿಕೃಷ್ಣನ್ ಅವರನ್ನು ಪುರಸ್ಕಾರಕ್ಕೆ ಆಯ್ಕೆ ನಡೆಸಿದೆ.