ಕೊಲ್ಲಂ: ಶಾಲೆಗಳಲ್ಲಿ ಸಾಮಾನ್ಯವಾಗಿ ಕಳಪೆ ಮಟ್ಟದ ಕೈಬರಹ ವಿದ್ಯಾರ್ಥಿಗಳಲ್ಲಿ ಕಂಡುಬಂದಾಗ ತಮಾಷೆಗಾಗಿ ನೀನು ವೈದ್ಯನಾಗಲು ಸೂಕ್ತ ಎಂಬ ಹಾಸ್ಯದ ಬಳಕೆ ರೂಢಿಯಲ್ಲಿದೆ. ಆದರೆ ಇದೀಗ ಅಂತಹ ಘಟನೆ ನಿಜವಾಗಿಯೂ ನಡೆದಿದ್ದು ಹಿರಿಯರ ಅನುಭವಗಳ ಸೊಲ್ಲಿನ ಹಿಂದೆ ನೈಜತೆ ಇದೆಯೆಂಬುದನ್ನು ಸಾಬೀತುಗೊಳಿಸಿದೆ ಎನ್ನಲೇ ಬೇಕು!
ಕೊಟ್ಟಾರಕಾರ ತಾಲ್ಲೂಕು ಆಸ್ಪತ್ರೆಯ ವೈದ್ಯರೊಬ್ಬರು ನೀಡಿದ ಔಷಧಿ ಚೀಟಿ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಔಷಧಿ ಚೀಟಿಯು ಸ್ವಲ್ಪ ವಿಲಕ್ಷಣವಾಗಿದ್ದು, ಬರೆಯಲ್ಪಟ್ಟ ಬರಹದ ಅಕ್ಷರಗಳು ಇವೆಯೇ ಎಂಬ ಬಗ್ಗೆ ಅನುಮಾನಗಳಿಗೆ ಎಡೆಮಾಡಿದೆ.
ಫಾರ್ಮಸಿ ಸಿಬ್ಬಂದಿಗಳಿಗೆ ಸಹ ಅದನ್ನು ಓದಲಾಗಲಿಲ್ಲ. ಜನವರಿ 4 ರಂದು ಆಸ್ಪತ್ರೆಗೆ ಆಗಮಿಸಿದ ರೋಗಿಯೊಬ್ಬರಿಗೆ ನೀಡಲಾದ ಪ್ರಿಸ್ಕ್ಸಿಪ್ಷನ್ ವ್ಯಾಪಕವಾಗಿ ಚರ್ಚೆಗೊಳಗಾಗಿದೆ.
ಇದರೊಂದಿಗೆ ಡಿಎಂಒ ಕೂಡ ಈ ವಿಷಯದ ಬಗ್ಗೆ ಗಮನ ಹರಿಸಿದ್ದು ಅವರಿಂದಲೂ ಓದಲಾಗಲಿಲ್ಲ. ವೈದ್ಯಕೀಯ ಅಧೀಕ್ಷಕರಿಂದ ವಿವರಣೆ ಕೋರಲಾಗಿದೆ. ಆದರೆ ಔಷಧಿ ನಿರ್ದೇಶನ ನೀಡಿದ್ದ ವೈದ್ಯರ ಕೈಬರಹ ಕಳಪೆಯಾಗಿರುವುದು ಈ ಹಿಂದೆಯೂ ಗಮನಕ್ಕೆ ಬಂದಿದೆಯೆಂದು ಡಿಎಂಒ ವಿವರಿಸಿದ್ದಾರೆ. ಆಸ್ಪತ್ರೆಯು ಅನಿಯಂತ್ರಿತವಾಗಿ ಕಾರ್ಯನಿರತವಾಗಿದ್ದು ಈ ಹಿನ್ನೆಲೆಯಲ್ಲಿ ಶೀಘ್ರವಾಗಿ ಬರೆಯಲಾಗಿದ್ದ ಕಾರಣ ಓದಲಾಗದೆ ಸಂಕಷ್ಟಕ್ಕೊಳಗಾಗಬೇಕಾಯಿತೆಂದು ಸ್ವತಃ ಬರಹದ ನಾಯಕ ವೈದ್ಯರು ವಿವರಣೆ ನೀಡಿದ್ದಾರೆ.