ಕೊಚ್ಚಿ: ಕೋವಿಡ್ ಲಸಿಕೆ ಹೊತ್ತ ವಿಮಾನ ಕೇರಳಕ್ಕೆ ಬುಧವಾರ ಆಗಮಿಸಿತು. ಮೊದಲ ಹಂತದ ಲಸಿಕೆ ನೆಡುಂಬಶ್ಚೇರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲಸಿಕೆ ಗೋ ಏರ್ ಜಿ 8 347 ವಿಮಾನದಲ್ಲಿ ಬೆಳಿಗ್ಗೆ 10.45 ಕ್ಕೆ ತಲಪಿತು. ಈ ಮೊದಲು ಬೆಳಿಗ್ಗೆ 11.30 ಕ್ಕೆ ವಿಮಾನ ಬರಲಿದೆ ಎಂದು ವರದಿಯಾಗಿತ್ತು. ಆದರೆ ನಿಗದಿತ ಸಮಕ್ಕಿಂತ ಮೊದಲೇ ಆಗಮಿಸಿತು.
ಲಸಿಕೆಗಳನ್ನು ಎರ್ನಾಕುಳಂ ಜನರಲ್ ಆಸ್ಪತ್ರೆಯಲ್ಲಿ ಸಂಗ್ರಹಿಸಲಾಗುವುದು. ಈ ಉದ್ದೇಶಕ್ಕಾಗಿ ವಿಶೇಷ ಶೈತ್ಯೀಕರಣ ಕೊಠಡಿಗಳು ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗಿದೆ. 1.80 ಲಕ್ಷ ಡೋಸ್ ಲಸಿಕೆಯನ್ನು 15 ಪೆಟ್ಟಿಗೆಗಳಲ್ಲಿ ವಿಶೇಷ ತಾಪಮಾನ ಹೊಂದಾಣಿಕೆಗಳೊಂದಿಗೆ ತಲುಪಿಸಲಾಗಿದೆ. ಅಂತಹ ಒಂದು ಪೆಟ್ಟಿಗೆಯಲ್ಲಿ ತಲಾ 12,000 ಡೋಸ್‍ಗಳ 15 ಪೆಟ್ಟಿಗೆಗಳಿವೆ. ಲಸಿಕೆಯನ್ನು ಪ್ರಾದೇಶಿಕ ಸಂಗ್ರಹಾಗಾರದಿಂದ ಪಾಲಕ್ಕಾಡ್, ಕೊಟ್ಟಾಯಂ, ತ್ರಿಶೂರ್, ಇಡುಕ್ಕಿ ಮತ್ತು ಎರ್ನಾಕುಳಂ ಜಿಲ್ಲೆಗಳಿಗೆ ಕಳುಹಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇತರ ಜಿಲ್ಲೆಗಳಿಗೆ ರಸ್ತೆ ಸಾರಿಗೆ ಮೂಲಕ ಕಳಿಸಲಾಗುವುದು. ಲಸಿಕೆಯ ಮೊದಲ ಚುಚ್ಚುಮದ್ದು ಶನಿವಾರ ನಡೆಯಲಿದೆ.
ಮೊದಲ ಹಂತದಲ್ಲಿ 4,33,500 ಡೋಸ್ ಕೋವಿಡ್ ಲಸಿಕೆಗಳನ್ನು ರಾಜ್ಯಕ್ಕೆ ತಲುಪಿಸಲಾಗಿದೆ. ಲಸಿಕೆಗಳನ್ನು ತಿರುವನಂತಪುರಂನಲ್ಲಿ 134,000 ಡೋಸ್, ಎರ್ನಾಕುಳಂ 1,80,000 ಡೋಸ್ ಮತ್ತು ಕೊಝಿಕ್ಕೋಡ್ ಗೆ 1,19,500 ಡೋಸ್ ವಿತರಿಸಲಾಗುತ್ತದೆ. ಕೋಝಿಕೋಡ್ ನಿಂದ 1,100 ಡೋಸ್ ಲಸಿಕೆಗಳನ್ನು ಮಾಹೆಯಲ್ಲಿ ವಿತರಿಸಲಾಗುವುದು.