ಕುಂಬಳೆ: ಗ್ರಾಮ ಪಂಚಾಯತಿಗೆ ನೂತನವಾಗಿ ಚುನಾಯಿತರಾದ ಸದಸ್ಯರಿಗೆ ಕುಂಬಳೆ ಆರೋಗ್ಯ ಬ್ಲಾಕ್(ಹೆಲ್ತ್ ಬ್ಲಾಕ್) ವತಿಯಿಂದ ಆರೋಗ್ಯ ವಿಭಾಗ ನಿರ್ವಹಣೆ ಸಂಬಂಧ ತರಬೇತಿ ಆರಂಭಗೊಂಡಿದೆ. ಬೆಳ್ಳೂರು, ಕುಂಬ್ಡಾಜೆ, ಎಣ್ಮಕಜೆ, ಬದಿಯಡ್ಕ, ಪುತ್ತಿಗೆ, ಮಧೂರು ಮತ್ತು ಕುಂಬಳೆ ಗ್ರಾಮ ಪಂಚಾಯಿತಿಗಳ ನೂತನ ಸದಸ್ಯರಿಗೆ ಆರೋಗ್ಯ ಇಲಾಖೆ ತರಬೇತಿ ನೀಡಲಿದೆ. ಜನವರಿ 15 ರೊಳಗೆ ತರಬೇತಿ ಪೂರ್ಣಗೊಳ್ಳಲಿದೆ.
ವಾರ್ಡ್ ನೈರ್ಮಲ್ಯ ಸಮಿತಿಯು ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು, ನಿಧಿ ಬಳಕೆ, ಉಪಶಾಮಕ ಮತ್ತು ರೋಗನಿರೋಧಕ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.
ಬೆಳ್ಳೂರು ಗ್ರಾಮ ಪಂಚಾಯತಿ ಸದಸ್ಯರಿಗೆ ಬೆಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತರಬೇತಿ ನಡೆಯಿತು. ಗ್ರಾ.ಪಂ. ಅಧ್ಯಕ್ಷ ಎಂ. ಶ್ರೀಧರ ಸಮಾರಂಭವನ್ನು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವೈದ್ಯಕೀಯ ಅಧಿಕಾರಿ ಡಾ.ಸಿ.ಎಚ್.ಅಖಿಲ್ ವಹಿಸಿದ್ದರು. ಬ್ಲಾಕ್ ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಪಿಎಚ್‍ಎನ್ ಮೇಲ್ವಿಚಾರಕ ಜೈನಮ್ಮ ಥಾಮಸ್ ಮತ್ತು ಆರೋಗ್ಯ ನಿರೀಕ್ಷಕ ಜಿ.ಸುನಿಲ್ ಅವರು ತರಗತಿ ನಿರ್ವಹಿಸಿದರು.
ಬ್ಲಾಕ್ ಪಂಚಾಯತಿ ಸದಸ್ಯ ಎನ್. ರವಿಪ್ರಸಾದ್, ಗ್ರಾಮ ಪಂಚಾಯತಿ ಸದಸ್ಯರುಗಳಾದ ಸುಜಾತ ಎಂ.ರೈ, ಎಚ್. ಬಿ. ವೀರೇಂದ್ರಕುಮಾರ್, ಬೇಬಿ, ಬಿ.ಎಲ್.ಗೀತಾ, ಭಾಗೀರಥಿ, ಕೆ.ಜಯಕುಮಾರ್ ಮತ್ತು ಚಂದ್ರಶೇಖರ ರೈ ಉಪಸ್ಥಿತರಿದ್ದರು.
ಜೂನಿಯರ್ ಹೆಲ್ತ್ ಇನ್ಸ್‍ಪೆಕ್ಟರ್ ತಿರಮಲೇಶ್ವರ ಸ್ವಾಗತಿಸಿ, ಜೂನಿಯರ್ ಪಬ್ಲಿಕ್ ಹೆಲ್ತ್ ನರ್ಸ್ ಲೀನಾ ವಂದಿಸಿದರು.