ಬದಿಯಡ್ಕ: ಕುಂಬಳೆ-ಬದಿಯಡ್ಕ-ಮುಳ್ಳೇರಿಯ ರಸ್ತೆಯನ್ನು 'ರೀ ಬ್ಯುಲ್ಡ್ ಕೇರಳ' ಯೋಜನೆಯನ್ವಯ ಅಭಿವೃದ್ಧಿಗೊಳಿಸುವ ಕಾರ್ಯಕ್ಕೆ ಚಾಲನೆ ಲಭಿಸಿದೆ. ವರ್ಷದ ಹಿಂದೆಯಷ್ಟೆ ಅಗಲಗೊಳಿಸಿ, ಡಾಂಬರೀಕರಣ ನಡೆಸಲಾಗಿದ್ದ ರಸ್ತೆ ಯನ್ನು ಕೇಂದ್ರ-ರಾಜ್ಯ ಸರ್ಕಾರದ ಜಂಟಿ ಯೋಜನೆಯನ್ವಯ ಸುಮಾರು 150ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಮತ್ತೆ ಯೋಜನೆ ಹಮ್ಮಿಕೊಳ್ಳಲಾಗಿದೆ. ಕುಂಬಳೆಯಿಂದ ಬದಿಯಡ್ಕ ಹಾದಿಯಾಗಿ ಮುಳ್ಳೇರಿಯಾಕ್ಕೆ 28 ಕಿ.ಮೀ ದೂರವಿದ್ದು, ಮುಳ್ಳೇರಿಯದಲ್ಲಿ ಕಾಸರಗೋಡು-ಸುಳ್ಯ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತಿದೆ.
ಪ್ರಮುಖ ಮೂರು ಪೇಟೆಗಳಾದ ಕುಂಬಳೆ, ಬದಿಯಡ್ಕ ಹಾಗೂ ಮುಳ್ಳೇರಿಯ ಮಧ್ಯೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಕಾಸರಗೋಡು-ಕಾಞಂಗಾಡು ರಸ್ತೆಯಂತೆ ಕೆಎಸ್ಟಿಪಿ(ಕೇರಳ ಸ್ಟೇಟ್ ಟ್ರಾನ್ಸ್ಪೋರ್ಟ್ ಪ್ರಾಜೆಕ್ಟ್) ಮೇಲ್ನೋಟದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಇದರಿಂದ ರಸ್ತೆಹಾದುಹೋಗುವ ಪೇಟೆಗಳ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ಉತ್ತೇಜನ ಲಭಿಸುವ ಸಾಧ್ಯತೆಯಿದೆ. ರಸ್ತೆ ಅಭಿವೃದ್ಧಿ ಕಾರ್ಯಗಳಿಗಾಗಿ ಇಂಜಿನಿಯರಿಂಗ್ ತಂಡ ಈಗಾಗಲೇ ಬದಿಯಡ್ಕದಲ್ಲಿ ಠಿಕಾಣಿ ಹೂಡಿದ್ದು, ರಸ್ತೆ ಲೆವೆಲಿಂಗ್ ತೆಗೆಯುವ ಕಾರ್ಯ ಆರಂಭಿಸಲಾಗಿದೆ. ರಸ್ತೆ ಸುಮಾರು ಒಂಬತ್ತು ಮೀ. ವರೆಗೆ ಅಗಲದಲ್ಲಿ ಅಭಿವೃದ್ಧಿಕಾರ್ಯ ನಡೆಯಲಿದ್ದು, ಕೆಲವೆಡೆ ಜಾಗ ಸ್ವಾಧೀನಪಡಿಸುವ ಪ್ರಕ್ರಿಯೆ ನಡೆಯಬೇಕಾಗಿದೆ. ಸೀತಾಂಗೋಳಿಯಿಂದ ಬದಿಯಡ್ಕ ವರೆಗೆ ಕೆಲವು ಪ್ರದೇಶದಲ್ಲಿ ರಸ್ತೆ ಇಕ್ಕಟ್ಟಿನಿಂದ ಕೂಡಿದ್ದು, ಮಿಕ್ಕೆಡೆ ಕಾಮಗಾರಿಗೆ ಅಗತ್ಯವಿರುವ ಜಾಗ ಹೊಂದಿದೆ.
ಅ|ಭಿಮತ:
ಕುಂಬಳೆ-ಮುಳ್ಳೇರಿಯ ರಸ್ತೆಯನ್ನು ಕೇರಳ ರೀ ಬ್ಯುಲ್ಡ್ ಯೋಜನೆಯನ್ವಯ ಅಭಿವೃದ್ಧಿಗೊಳಿಸಲಾಗುತ್ತಿದ್ದು, ದೆಹಲಿ ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿರುವ ಆರ್ಡಿಎಸ್ ಸಂಸ್ಥೆ ಟೆಂಡರ್ ವಹಿಸಿಕೊಂಡಿದೆ. ಕೆಎಸ್ಟಿಪಿ ಮೇಲ್ನೋಟದಲ್ಲಿ ಅಭಿವೃದ್ಧಿಕಾರ್ಯಗಳು ನಡೆಯಲಿದ್ದು, ರಸ್ತೆ ಲೆವೆಲಿಂಗ್ ತೆಗೆಯುವ ಕಾರ್ಯ ಆರಂಭಿಸಲಾಗಿದೆ. ಕಾಮಗಾರಿ ಶೀಘ್ರ ಆರಂಭಗೊಳ್ಳುವ ಸಾಧ್ಯತೆಯಿದೆ.
ಶೀಲಾ, ಸಹಾಯಕ ಮಹಾ ಅಭಿಯಂತೆ
ಕೆಎಸ್ಟಿಪಿ, ಕಣ್ಣೂರು