ಶ್ರೀನಗರ: ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿ ಕಾಶ್ಮೀರ ಪೊಲೀಸರ ಎನ್ ಕೌಂಟರ್ ಗೆ ಬಲಿಯಾದ ಯುವಕರ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಒಪ್ಪಿಸುವ ಪ್ರಶ್ನೆಯೇ ಇಲ್ಲ ಎಂದು ಜಮ್ಮು-ಕಾಶ್ಮೀರ ಐಜಿಪಿ ಸ್ಪಷ್ಟಪಡಿಸಿದ್ದಾರೆ.
ಡಿ.30 ರಂದು ಲಾವೆಪೊರಾದಲ್ಲಿ ಮೂವರು ಯುವಕರನ್ನು ಪೊಲೀಸ್ ಪಡೆ ಎನ್ ಕೌಂಟರ್ ಮಾಡಿತ್ತು. ಮೂವರೂ ಯುವಕರು ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಕ್ಕೆ ಸ್ಪಷ್ಟ ಸಾಕ್ಷ್ಯಾಧಾರಗಳಿವೆ, ಅವರ ಕುಟುಂಬ ಸದಸ್ಯರು, ಪೋಷಕರೊಂದಿಗೆ ಯುವಕರ ವಿರುದ್ಧ ಇರುವ ಸಾಕ್ಷ್ಯಾಧಾರಗಳನ್ನು ಹಂಚಿಕೊಳ್ಳಲಾಗುವುದು ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.
ಡಿ.30 ರಂದು ಪೊಲೀಸರು- ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ಅಖ್ತರ್ ಮುಸ್ತಾಕ್ (16), ಅಜೀಜ್ ಅಹ್ಮದ್ ಗನೈ ಹಾಗೂ ಜುಬೈರ್ ಅಹ್ಮದ್ ಲೋನ್ ಎಂಬ ಮೂವರು ಯುವಕರನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದರು.
ಈ ಯುವಕರು ಭಯೋತ್ಪಾದನೆಯಲ್ಲಿ ತೊಡಗಿದ್ದು ಭಯೋತ್ಪಾದಕರಿಗೆ ಲಾಜಿಸ್ಟಿಕ್ ಬೆಂಬಲವನ್ನು ನೀಡುತ್ತಿದ್ದರು. ಪೋಷಕರಿಗೆ ಅವರ ಮಕ್ಕಳು ಯಾವೆಲ್ಲಾ ರೀತಿಯಲ್ಲಿ ಭಯೋತ್ಪಾದನೆಯಲ್ಲಿ ತೊಡಗಿದ್ದರು ಎಂಬುದನ್ನು ಸಾಕ್ಷ್ಯ ಸಮೇತ ವಿವರಿಸಲಿದ್ದೇವೆ ಎಂದು ಹೇಳಿದ್ದಾರೆ.
ಮೃತರ ಅಂತ್ಯಕ್ರಿಯೆ ಪೋಷಕರು, ಪೊಲೀಸರು, ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲೇ ನಡೆದಿದೆ. ಅದರೂ ಸೂಕ್ತ ರೀತಿಯಲ್ಲಿ ಕುಟುಂಬಗಳು ಇಚ್ಛಿಸುವಂತೆ ಅಂತ್ಯಕ್ರಿಯೆ ನಡೆದಿಲ್ಲ, ಆದ್ದರಿಂದ ಮೃತ ದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು.
ಈಗ ಕೋವಿಡ್-19 ಇರುವ ಕಾರಣದಿಂದಾಗಿ ಸಾಮಾನ್ಯರ ಮೃತದೇಹಗಳನ್ನೇ ಕುಟುಂಬ ಸದಸ್ಯರಿಗೆ ಹಸ್ತಾಂತರಿಸುತ್ತಿಲ್ಲ. ಹೀಗಿರುವಾಗ ಭಯೋತ್ಪಾದಕರ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದರೆ ಭಾವೋದ್ವೇಗದಿಂದ ಕುಟುಂಬ ಸದಸ್ಯರೂ ಸೇರಿ ಸಾವಿರಾರು ಮಂದಿ ಭಾಗಿಯಾಗುತ್ತಾರೆ. ಕೋವಿಡ್-19 ನಿಯಮಗಳೂ ಉಲ್ಲಂಘನೆಯಾಗಲಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.