ನವದೆಹಲಿ: ಗೋವುಗಳ ರಕ್ಷಣೆಗಾಗಿ ಮೋದಿ ಸರಕಾರವು ಸ್ಥಾಪಿಸಿರುವ ರಾಷ್ಟ್ರೀಯ ಕಾಮಧೇನು ಆಯೋಗ (ಆರ್‌ಕೆಎ)ವು ದೇಶಿ ಗೋವುಗಳ ಬಗ್ಗೆ ಜನರಲ್ಲಿ ಅರಿವನ್ನು ಹೆಚ್ಚಿಸಲು ಮುಂದಿನ ತಿಂಗಳು ಆನ್‌ಲೈನ್ ಪರೀಕ್ಷೆಯನ್ನು ನಡೆಸುವುದಾಗಿ ಮಂಗಳವಾರ ಪ್ರಕಟಿಸಿದೆ. ಇದೇ ವೇಳೆ,ಗೋಉತ್ಪನ್ನಗಳು ಮತ್ತು ಆಯುರ್ವೇದ ಔಷಧಿಗಳ ಸಂಯೋಜನೆಯೊಂದಿಗೆ ತಾನು ನಡೆಸಿದ್ದ ಕ್ಲಿನಿಕಲ್ ಟ್ರಯಲ್ ಸೌಮ್ಯ ಸ್ವರೂಪದ ಕೋವಿಡ್-19 ಅನ್ನು ಗುಣಪಡಿಸುವಲ್ಲಿ ಶೇ.96ರಷ್ಟು ಪರಿಣಾಮಕಾರಿಯಾಗಿದೆ ಎಂದು ಅದು ಹೇಳಿದೆ.
2019ರಲ್ಲಿ ಸ್ಥಾಪನೆಗೊಂಡಿರುವ ಆರ್‌ಕೆಎ ಪಶು ಸಂಗೋಪನಾ ಸಚಿವಾಲಯದ ಅಧೀನದಲ್ಲಿದ್ದು,ದೇಶಿ ಆಕಳುಗಳು ಮತ್ತು ಅವುಗಳ ಸಂತತಿಯ ರಕ್ಷಣೆ ಹಾಗೂ ಅಭಿವೃದ್ಧಿಯ ಉದ್ದೇಶವನ್ನು ಹೊಂದಿದೆ. ನಮ್ಮ ದೇಶದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಲ್ಲಿ ಪಶುವು ಪ್ರಮುಖ ಪಾತ್ರ ವಹಿಸುತ್ತದೆ. ಸಣ್ಣ ರೈತರು,ಮಹಿಳೆಯರು ಮತ್ತು ಯುವ ಉದ್ಯಮಿಗಳಿಗೆ ಜೀವನೋಪಾಯ ಸೃಷ್ಟಿಗೆ ಒತ್ತು ನೀಡುವುದರೊಂದಿಗೆ ಜಾನುವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ನಿರ್ದೇಶನಗಳನ್ನು ನೀಡುವ ಹೊಣೆಗಾರಿಕೆಯನ್ನು ಆಯೋಗಕ್ಕೆ ನೀಡಲಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಗದ ಅಧ್ಯಕ್ಷ ವಲ್ಲಭಭಾಯಿ ಕಥಿರಿಯಾ ಅವರು,'ಕಾಮಧೇನು ಗೋ ವಿಜ್ಞಾನ ಪ್ರಚಾರ ಪ್ರಸಾರ ಪರೀಕ್ಷೆ 'ಯು ಫೆ.25ರಂದು ನಡೆಯಲಿದೆ. ಆಸಕ್ತರು ಸ್ವಯಂಇಚ್ಛೆಯಿಂದ ಪರೀಕ್ಷೆಯನ್ನು ಬರೆಯಬಹುದು ಎಂದು ತಿಳಿಸಿದರಾದರೂ, ಪರೀಕ್ಷೆಗಳನ್ನು ನಡೆಸುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರಿಗೆ ಆಯೋಗವು ಕೋರಿಕೆ ಪತ್ರಗಳನ್ನು ಕಳುಹಿಸಿದೆ ಎಂದರು.
'ಗೋ ಮಾತಾ 'ಎನ್ನುವುದು ಗೌರವಾನ್ವಿತ ಶಬ್ದವಾಗಿದೆ, ಆದರೆ ಅದು ಶಾಸ್ತ್ರಗಳಿಗೆ ಮಾತ್ರ ಸೀಮಿತವಾಗಿರುವಂತಿದೆ. ಈ ಬಗ್ಗೆ ಜನರಲ್ಲಿ ಸಾಕಷ್ಟು ಅರಿವಿಲ್ಲ, ಹೀಗಾಗಿ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ. ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೆ, ಒಂಭತ್ತರಿಂದ ಹತ್ತನೇ ತರಗತಿ,ಕಾಲೇಜು ಮಟ್ಟದಲ್ಲಿ ಮತ್ತು ವಿದೇಶಿ ಪ್ರಜೆಗಳು ಸೇರಿದಂತೆ ಸಾರ್ವಜನಿಕರಿಗಾಗಿ ಹೀಗೆ ನಾಲ್ಕು ವಿಭಾಗಗಳಲ್ಲಿ ಪರೀಕ್ಷೆಯು ನಡೆಯಲಿದೆ. ಒಂದು ಗಂಟೆ ಅವಧಿಯ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು 12 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುವುದು. ಪರೀಕ್ಷೆಯ ಪಠ್ಯಕ್ರಮ,ಆಕಳುಗಳ ಕುರಿತು ಸಾಹಿತ್ಯ ಮತ್ತು ಪುಸ್ತಕಗಳ ಬಗ್ಗೆ ಆಯೋಗದ ಜಾಲತಾಣದಲ್ಲಿ ಮಾಹಿತಿಗಳನ್ನು ಒದಗಿಸಲಾಗುವುದು. ಬ್ಲಾಗ್‌ಗಳು,ವೀಡಿಯೊಗಳನ್ನೂ ಅಪ್‌ಲೋಡ್ ಮಾಡಲಾಗುವುದು. ಪರೀಕ್ಷೆಯ ಫಲಿತಾಂಶವನ್ನು ತಕ್ಷಣವೇ ಆರ್‌ಕೆಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಕಥಿರಿಯಾ ತಿಳಿಸಿದರು. ಪರೀಕ್ಷೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರಗಳನ್ನು ನೀಡಲಾಗುವುದು . ಯಶಸ್ವಿ ಪ್ರತಿಭಾವಂತರಿಗೆ ಬಹುಮಾನಗಳನ್ನೂ ನೀಡಲಾಗುವುದು ಎಂದರು.
2020 ಜೂನ್ ಮತ್ತು ಅಕ್ಟೋಬರ್ ನಡುವಿನ ಅವಧಿಯಲ್ಲಿ ಗೋ ಉತ್ಪನ್ನಗಳಾದ ಹಾಲು,ಗೋಮೂತ್ರ,ಗೋಮಯ,ಮೊಸರು ಮತ್ತು ತುಪ್ಪ ಇವುಗಳನ್ನು ಬಳಸಿ ತಯಾರಿಸಲಾದ 'ಪಂಚಗವ್ಯ 'ವನ್ನು ಕಢಾ ಮತ್ತು ಸಂಜೀವನಿ ವಟಿಯಂತಹ ಆಯುರ್ವೇದ ಔಷಧಿಗಳ ಸಂಯೋಜನೆಯೊಂದಿಗೆ ಬಳಸಿ 800 ಕೋವಿಡ್ ರೋಗಿಗಳ ಮೇಲೆ ನಡೆಸಲಾದ ಕ್ಲಿನಿಕಲ್ ಟ್ರಯಲ್ ಶೇ.96ರಷ್ಟು ಪರಿಣಾಮಕಾರಿತ್ವವನ್ನು ಪ್ರದರ್ಶಿಸಿದೆ. ಟ್ರಯಲ್‌ನ ಫಲಿತಾಂಶಗಳ ವರದಿಯನ್ನು ಶೀಘ್ರವೇ ವೈದ್ಯಕೀಯ ಜರ್ನಲ್‌ವೊಂದರಲ್ಲಿ ಪ್ರಕಟಿಸಲಾಗುವುದು ಮತ್ತು ಇದಕ್ಕಾಗಿ ಆಯೋಗವು ಆಯುಷ್ ಸಚಿವಾಲಯದ ಸಂಪರ್ಕದಲ್ಲಿದೆ ಎಂದು ಕಥಿರಿಯಾ ತಿಳಿಸಿದರು.