ಬದಿಯಡ್ಕ: ಬ್ರಹ್ಮಶ್ರೀ ತಂತ್ರವಿದ್ಯಾತಿಲಕ ತಂತ್ರಿ ಅನಂತಪದ್ಮನಾಭ ಉಪಾಧ್ಯಾಯ ಕೊಲ್ಲಂಗಾನ ಇವರ 17ನೇ ಸಂಸ್ಮರಣಾ ಸಮಾರಂಭ ಜ.22 ರಿಂದ 26ರ ವರೆಗೆ ಕೊಲ್ಲಂಗಾನ ಶ್ರೀನಿಲಯ ಕ್ಷೇತ್ರದಲ್ಲಿ ನಡೆಯಲಿದೆ.
ಸರಳ ಸಜ್ಜನ ವ್ಯಕ್ತಿತ್ವದ, ತಂತ್ರಶಾಸ್ತ್ರದಲ್ಲಿ ಅಪಾರ ಜ್ಞಾನ ಪಡೆದು ಸಮಾಜದ ಏಳಿಗೆಗೆ ಅಹರ್ನಿಶಿ ದುಡಿದಿದ್ದ ಅನಂತಪದ್ಮನಾಭ ಉಪಾಧ್ಯಾಯರು ಕಳೆದ ದಶಕದಲ್ಲಿ ಸುಬ್ರಹ್ಮಣ್ಯ ಮಠಾಧೀಶರಿಂದ ತಂತ್ರವಿದ್ಯಾತಿಲಕರೆಂದು ಬಿರುದಾಂಕಿತರಾದವರು. ವೈದಿಕ, ಧಾರ್ಮಿಕ, ಸಾಮಾಜಿಕ ರಂಗಗಳಲ್ಲಿ ತಮ್ಮ ನಿಸ್ವಾರ್ಥ ಸೇವೆಯಿಂದ ದಕ್ಷರೆಂದೇ ಪ್ರಖ್ಯಾತರಾಗಿ ಯಕ್ಷಗಾನ ಕ್ಷೇತ್ರದ ಅಭ್ಯುದಯಕ್ಕೆ ತಮ್ಮಲ್ಲೇ ನೆಲೆ ಕಲ್ಪಿಸಿಕೊಟ್ಟವರಾಗಿದ್ದರು. ಈ ಮೂಲಕ ಕೊಲ್ಲಂಗಾನ ಮೇಳ ರೂಪಿಸಲು ಕಾರಣರಾದವರು.
ಈ ಹಿನ್ನೆಲೆಯಲ್ಲಿ ತಂತ್ರಿವರ್ಯರ ಸ್ಮರಣೆಯೊಂದಿಗೆ ಜ.22 ರಿಂದ 26ರವರೆಗೆ ಕೋವಿಡ್ ಮಾನದಂಡಗಳೊಂದಿಗೆ ಪ್ರತಿದಿನ ಸಂಜೆ 6 ರಿಂದ ರಾತ್ರಿ 10ರ ವರೆಗೆ ಯಕ್ಷ ಪಂಚಕ ಎಂಬ ಯಕ್ಷಗಾನ ಆಖ್ಯಾನಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಜ.22 ರಂದು ಸಂಜೆ 5 ಕ್ಕೆ ಗಣ್ಯರಿಂದ ಉದ್ಘಾಟನೆ-ಸಂಸ್ಮರಣೆ ನಡೆಯಲಿದೆ. ಬಳಿಕ ಬಳಿಕ ವಾವರಮೋಕ್ಷ ಯಕ್ಷಗಾನ ಪ್ರದರ್ಶನ ನಡೆಯಲಿದೆ. 23 ರಂದು ಷಣ್ಮುಖ ಲೀಲೆ, 24 ರಂದು ವಾಮನ ಚರಿತ್ರೆ, 25 ರಂದು ಶ್ವೇತ ವರಾಹ, 26 ರಂದು ಗಿರಿಜಾ ಕಲ್ಯಾಣ ಆಖ್ಯಾಯಿಕೆಗಳ ಪ್ರದರ್ಶನ ನಡೆಯಲಿದೆ.