ಅಹ್ಮದಾಬಾದ್: ಉತ್ತರ ಭಾರತದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಹಕ್ಕಿ ಜ್ವರ ಇದೀಗ ಗುಜರಾತ್ ಗೂ ವ್ಯಾಪಿಸಿದ್ದು, ಮೆಹ್ಸಾನದಲ್ಲಿ ಹಲವು ಕಾಗೆಗಳು ಸತ್ತುಬಿದ್ದಿವೆ.
ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ಗುರುವಾರ ನಾಲ್ಕು ಕಾಗೆಗಳು ಶವವಾಗಿ ಪತ್ತೆಯಾಗಿವೆ. ಮೆಹ್ಸಾನಾದ ಮೊಧೇರಾ ಗ್ರಾಮದಲ್ಲಿರುವ ಪ್ರಸಿದ್ಧ ಸೂರ್ಯ ದೇವಾಲಯದ ಆವರಣದಲ್ಲಿ ಕಾಗೆಗಳು ಸತ್ತಿವೆ. ಈ ಕುರಿತಂತೆ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಸತ್ತ ಕಾಗೆಗಳ ಮೃತದೇಹಗಳನ್ನು ಪಕ್ಷಿ ಜ್ವರ ಅಥವಾ ಇತರ ಕಾರಣಗಳಿಂದ ಸಾವನ್ನಪ್ಪಿದೆಯೆ ಎಂದು ಪರೀಕ್ಷಿಸಲು ಭೋಪಾಲ್ ಮೂಲದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತ್ತ ಕಾಗೆಗಳ ಸಾವಿನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಗುಜರಾತ್ ಪಶುಸಂಗೋಪನಾ ಇಲಾಖೆ ಬುಧವಾರ ಕಣ್ಗಾವಲು ನಡೆಸಲು ರಾಜ್ಯದಾದ್ಯಂತ ಎಚ್ಚರಿಕೆ ನೀಡಿದೆ. ಆದಾಗ್ಯೂ, ಪಶುಪಾಲನಾ ಸಚಿವ ಕುನ್ವರ್ಜಿ ಬವಾಲಿಯಾ ಅವರು, ಗುಜರಾತ್ ನಲ್ಲಿ ಈವರೆಗೂ ಹಕ್ಕಿ ಜ್ವರ ಪ್ರಕರಣಗಳು ವರದಿಯಾಗಿಲ್ಲ. ಅದಾಗ್ಯೂ ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹೇಳಿದ್ದಾರೆ.
ಗುಜರಾತ್ ಮಾತ್ರವಲ್ಲದೇ ನಿನ್ನೆ ಮಧ್ಯಪ್ರದೇಶದ ಇಂದೋರ್, ಅಗರ್, ಮಾಲ್ವಾ ಮತ್ತು ಮಾಂಡ್ಸೌರ್ ಜಿಲ್ಲೆಗಳಲ್ಲಿ ಇತ್ತೀಚೆಗೆ ಕೆಲವು ಕಾಗೆಗಳಲ್ಲಿ ಹಕ್ಕಿ ಜ್ವರ ವೈರಸ್ ಪತ್ತೆಯಾಗಿದೆ.