ಬದಿಯಡ್ಕ: ಅನೇಕ ಸವಾಲುಗಳನ್ನು ಧೈರ್ಯದಿಂದ ಎದುರಿಸಿದ ಶ್ರೀರಾಮನ ಭಕ್ತರ ಹೋರಾಟದ ನೆನಪು ಸದಾ ಹಸಿರಿರುವಂತೆ ನಿಧಿಸಮರ್ಪಣಾ ಅಭಿಯಾನ ಆರಂಭವಾಗಿದೆ. ಈ ಅಭಿಯಾನದ ಮೂಲಕ ಪ್ರತೀ ಮನೆಮನಗಳಲ್ಲಿ ಅಯೋಧ್ಯೆಯ ನೆನಪು ಮತ್ತೆ ಮರುಕಳುಸುತ್ತದೆ. ಸಮಾಜಬಾಂಧವರು ರಾಜಕೀಯ ಬೇಧವನ್ನು ಮರೆತು ಶ್ರೀರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಆರೆಸ್ಸೆಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ ಭಟ್ ಕರೆನೀಡಿದರು.
ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಭಾನುವಾರ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ನಡೆದ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಬದಿಯಡ್ಕ ಪಂಚಾಯಿತಿ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ಅಯೋಧ್ಯೆಯ ಶ್ರೀರಾಮ ಮಂದಿರಕ್ಕಾಗಿ ನಡೆದ ಹೋರಾಟದ ವಿವಿಧ ಮಜಲುಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಶ್ರೀರಾಮಜನ್ಮ ಭೂಮಿ ನಿಧಿ ಸಮರ್ಪಣಾ ಅಭಿಯಾನದ ವಿಭಾಗ ಸಾಹಿತ್ಯ ಪ್ರಮುಖ್ ಅಶೋಕ್ ಬಾಡೂರು, ರಾಮಕೃಷ್ಣ ಹೆಬ್ಬಾರ್ ಉಪಸ್ಥಿತರಿದ್ದರು. ರಮೇಶ್ ಕಳೇರಿ ಪರಿಚಯಿಸಿದರು.