ಕುಂಬಳೆ: ಪ್ರತಿಷ್ಠಿತ ಟ್ರಾವೆಂಕೂರ್ ಶೋರ್ಟ್ ಮೂವೀ ಪೇಸ್ಟಿವಲ್ ಸ್ಪರ್ಧೆಗೆ ಇದೇ ಮೊದಲಬಾರಿಗೆ ತುಳು ಕಿರುಚಿತ್ರವೊಂದು ಆಯ್ಕೆಯಾಗಿದೆ.
ಕಾಸರಗೋಡು ಜಿಲ್ಲೆಯ ಕುಂಬಳೆಯ ಯುವ ನಿರ್ದೇಶಕ ಗೌತಮ್ ಶೆಟ್ಟಿ ಬರೆದು ನಿರ್ದೇಶಿಸಿರುವ "ಒಂನ್ಸ್ ಅಫ್ ಓನ್ ಎ ಟೈಮ್ ಇನ್ ಕಾಸರಗೋಡು" ಎಂಬ ಕಿರುಚಿತ್ರ ಜ್ಯೂರಿಗಳ ಆಯ್ಕೆ ಸಮಿತಿಗೆ ಆಯ್ಕೆಯಾಗಿದೆ. ಕನ್ನಡ, ಮಲೆಯಾಳ, ತಮಿಳು, ತೆಲುಗು, ಹಿಂದಿ ಹಾಗೂ ಆಂಗ್ಲ ಭಾಷೆಗಳ ಆಯ್ದ ಕಿರುಚಿತ್ರಗಳು ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ. ಈ ಬಾರಿ ಇದೇ ಮೊದಲ ಬಾರಿಗೆ ಕಾಸರಗೋಡು ಪ್ರದೇಶದ ಯುವ ನಿರ್ದೇಶಕರ ತುಳು ಚಿತ್ರ ಆಯ್ಕೆಯಾಗಿರುವುದು ವಿಶೇಷತೆಯಾಗಿದೆ.
ಒಟ್ಟು ಏಳು ನಿಮಿಷಗಳ ಚಿತ್ರ ಕೊಲೆ ಪ್ರಕರಣದ ಕಥೆಯೊಂದಿಗೆ ಆರಂಭಗೊಳ್ಳುತ್ತದೆ. ವಿಕ್ಷಿಪ್ತತೆಯಲ್ಲಿ ಅಂತ್ಯಗೊಳ್ಳುವ ಚಿತ್ರದ ಒಟ್ಟು ಸಂದೇಶ ವೀಕ್ಷಕರಿಗೆ ಬಿಡಲಾಗಿದೆ ಎಂದು ಹೇಳಿರುವ ನಿರ್ದೇಶಕರು ಓರ್ವ ರಾಜಕಾರಣಿ ಹಾಗೂ ಪತ್ರಕರ್ತ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದು ಗುಟ್ಟುಬಿಟ್ಟುಕೊಡದೆ ಮಾಹಿತಿ ನೀಡಿರುವರು.
ಗೌತಮ್ ಶೆಟ್ಟಿ ಕುಂಬಳೆ ಪುತ್ತಿಗೆಯ ರವಿರಾಜ ಶೆಟ್ಟಿ-ವನಿತಾ ಶೆಟ್ಟಿ ದಂಪತಿಗಳ ಪುತ್ರನಾಗಿದ್ದು, ಮಂಗಳೂರು ಎಜೆ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗಮಾಡುತ್ತಿದ್ದಾರೆ.