ರೈತರ ಪ್ರತಿಭಟನೆಯ ಸಂದರ್ಭದಲ್ಲಿ ನಿರ್ಮಾಣವಾದ ಅವ್ಯವಸ್ಥೆ, ಹಿಂಸಾಚಾರ, ಕೆಂಪು ಕೋಟೆಯ ಮೇಲೆ ರೈತರು ಧ್ವಜ ಹಾರಿಸಿದ್ದೇ ಮುಂತಾದ ಘಟನೆಗಳು ಮತ್ತು ಆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳು ರಾಜಕೀಯ ಪಕ್ಷಗಳನ್ನು ಗೊಂದಲಕ್ಕೆ ತಳ್ಳಿವೆ. ಎಲ್ಲಾ ಪಕ್ಷಗಳು ಈ ಘಟನೆಯಿಂದ ಅಂತರ ಕಾಯ್ದುಕೊಳ್ಳುತ್ತಿವೆ.
ಟ್ರ್ಯಾಕ್ಟರ್ ರ್‍ಯಾಲಿಯ ಸಂದರ್ಭದಲ್ಲಿ ನಡೆದ ಗಲಭೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ವಿರೋಧ ಪಕ್ಷಗಳು ಟೀಕಿಸಿದ್ದರೂ, ರೈತರ ಗುಂಪೊಂದು ಕೆಂಪು
ಕೋಟೆಯೊಳಗೆ ಪ್ರವೇಶಿಸಿದ ಘಟನೆಗೆ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಆರಂಭದಿಂದಲೇ ರೈತರ ಹೋರಾಟವನ್ನು ಬೆಂಬಲಿಸಿದ್ದರೂ, ಆ ಪಕ್ಷದ ಮುಖಂಡರಾದ ಶಶಿ ತರೂರ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. 'ರೈತರು ಈವರೆಗೆ ಸಂಪಾದಿಸಿದ ಗೌರವವನ್ನು ಈ ಘಟನೆ ಹಾಳು ಮಾಡಿದೆ' ಎಂಬ ಅಭಿಪ್ರಾಯವನ್ನು ಈ ನಾಯಕರು ವ್ಯಕ್ತಪಡಿಸಿದ್ದಾರೆ.
ಹೋರಾಟದ ಮುಂಚೂಣಿಯಲ್ಲೇ ಕಾಣಿಸಿಕೊಂಡಿರುವ, ಸ್ವರಾಜ್ ಪಾರ್ಟಿಯ ಮುಖಂಡ ಯೋಗೇಂದ್ರ ಯಾದವ್ ಅವರು, 'ಮಂಗಳವಾರದ ಘಟನೆಯಿಂದ ಶಾಂತಿ ಕದಡಿದೆ' ಎಂದಿದ್ದಾರೆ.
'ವಾಸ್ತವದಲ್ಲಿ ಆಗಿದ್ದೇನು ಎಂಬುದು ನನಗೆ ಗೊತ್ತಿಲ್ಲ. ಆದರೆ ಈ ಘಟನೆ ಅತ್ಯಂತ ನಾಚಿಕೆಗೇಡಿನದ್ದು ಮತ್ತು ಖಂಡನೀಯ. ಈ ಘಟನೆಯು ಈವರೆಗಿನ ಚಳವಳಿಯನ್ನು ಪ್ರತಿನಿಧಿಸುವುದಿಲ್ಲ' ಎಂದು ಯಾದವ್ ಹೇಳಿದ್ದಾರೆ.
ಪ್ರತಿಭಟನೆಯನ್ನು ಬೆಂಬಲಿಸುತ್ತಿರುವ ವಿರೋಧಪಕ್ಷಗಳನ್ನು ಕಟ್ಟಿಹಾಕಲು ಬೇಕಾಗುವಷ್ಟು ಶಸ್ತ್ರಾಸ್ತ್ರಗಳನ್ನು ಬಿಜೆಪಿ ಹಾಗೂ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಒದಗಿಸಲಿದೆ ಎಂಬುದು ಎಲ್ಲಾ ಪಕ್ಷಗಳ ಮುಖಂಡರಿಗೆ ಸ್ಪಷ್ಟವಾಗಿದೆ.
ಘಟನೆಯ ನಂತರ ಪ್ರತಿಕ್ರಿಯೆ ನೀಡಿರುವ ಎಎಪಿ, 'ಇದು ಚಳವಳಿಯನ್ನು ದುರ್ಬಲಗೊಳಿಸಿದೆ' ಎಂದಿರುವುದಲ್ಲದೆ ಇದರ ಹೊಣೆಯನ್ನು ಕೇಂದ್ರ ಸರ್ಕಾರದ ಮೇಲೆ ಹೊರಿಸಿದೆ. 'ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಕೇಂದ್ರದ ಜವಾಬ್ದಾರಿಯಾಗಿತ್ತು. ಸರ್ಕಾರ ಇದರಲ್ಲಿ ವಿಫಲವಾಗಿದೆ' ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.