ಕಾಸರಗೋಡು: ಪೆರಿಯ ಸೆಂಟ್ರಲ್ ಯೂನಿವರ್ಸಿಟಿಯ ಅಗತ್ಯಗಳಿಗಾಗಿ ಮೂನಾಂಕಡವು ನದಿಯ ಸಮೀಪ ನಿರ್ಮಿಸಲಾದ ಬೃಹತ್ ಟ್ಯಾಂಕ್ ನಲ್ಲಿ ಉಸಿರುಗಟ್ಟಿದ ನಾಲ್ವರು ಕಾರ್ಮಿಕರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಟ್ಯಾಂಕ್ ಸ್ವಚ್ಚತೆಗಾಗಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ಕೆಲಸದ ಕೊನೆಯಲ್ಲಿ ಸುಮಾರು 100 ಅಡಿ ಆಳದ ಶೇಖರಣಾ ತೊಟ್ಟಿಯಲ್ಲಿ ಸಿಲುಕಿಕೊಂಡರು. ಕೋಲ್ಕತ್ತಾದ ನೂರ್ ಆಲಂ, ಸಿರಾಜುಲ್, ಆಶಿಮ್ ಚೌಧರಿ ಮತ್ತು ಶಿಕಿದಾರ್ ಅವರನ್ನು ಕೊನೆಗೆ ಹರಸಾಹಸದಿಂದ ಮೇಲೆತ್ತಿ ಮಾವುಂಗಾಲ್ ಸಂಜೀವನಿ ಆಸ್ಪತ್ರೆಗೆ ಸಾಗಿಸಲಾಗಿದೆ.
ನಿನ್ನೆ(ಶುಕ್ರವಾರ) ಸಂಜೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ.
ಟ್ಯಾಂಕ್ ನ್ನು ಒಂದು ವರ್ಷದ ಹಿಂದೆ ನಿರ್ಮಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆಯಿಂದ ಕಾರ್ಮಿಕರು ಟ್ಯಾಂಕ್ ಸ್ವಚ್ಚತೆಗೆ ತೊಡಗಿಸಿಕೊಂಡಿದ್ದರು. ಸಂಜೆ 6 ಗಂಟೆ ಸುಮಾರಿಗೆ ನಾಲ್ವರು ಬಂಗಾಳಿ ಕಾರ್ಮಿಕರು ಉಸಿರುಗಟ್ಟಿ ನೆಲಕ್ಕೆ ಬಿದ್ದರು. ರಕ್ಷಣೆಗೆ ಬಂದ ಇತರರಿಗೂ ಉಸಿರುಗಟ್ಟುವಿಕೆ ಅನುಭವಿಸಿದರು. ಇದರೊಂದಿಗೆ ಕಾರ್ಮಿಕರು ಭಯಭೀತರಾದರು. ಅಷ್ಟರಲ್ಲಿ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಟ್ಯಾಂಕ್‍ಗೆ ಇಳಿದು ನಾಲ್ವರನ್ನು ರಕ್ಷಿಸಿದ್ದಾರೆ. ಕುತ್ತಿಕೋಲ್ ನಿಂದ ಅಗ್ನಿಶಾಮಕ ತಂಡ ಮತ್ತು ಬೇಕಲ್ ಪೋಲೀಸರು ಸ್ಥಳಕ್ಕೆ ತಲುಪಿದ್ದರು.
ರಕ್ಷಿಸಿದವರಿಗೆ ಅಭಿನಂದನೆ:
ಕಾರ್ಮಿಕರ ಕೂಗು ಕೇಳಿ ಸ್ಥಳೀಯರಾದ ಮೋಹನನ್ ಕೂವಾರ, ಕಣ್ಣನ್ ಕೂವಾರ, ಮಣಿಕಂಠನ್ ಮೀನಾಂಕುಳಂ ಮತ್ತು ರಶೀದ್ ಪೆರಿಯತ್ ಟ್ಯಾಂಕ್ ಬಳಿ ಧಾವಿಸಿದರು. ಬಳಿಕ ವಿಷಯ ತಿಳಿದು ಹಿಂದು-ಮುಂದು ಯೋಚಿಸದೆ ರಕ್ಷಣೆಗೆ ಧುಮಿಕಿದರು. ಹರಸಾಹಸದಿಂದ ಮೇಲೆತ್ತಿ ಅವರು ನಾಲ್ವರನ್ನು ಆಸ್ಪತ್ರೆಗೆ ಕರೆದೊಯ್ದರು. ರಕ್ಷಿಸಿದವರನ್ನು ಸ್ಥಳೀಯರು ಮತ್ತು ಬೇಕಲ್ ಪೋಲೀಸರು ಮುಕ್ತಕಂಠದಿಂದ ಶ್ಲಾಘಿಸಿರುವರು.