ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷ ಜೋ ಬಿಡೆನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೈಟ್ ಹೌಸ್ ತೊರೆದು ಮೇರಿಲ್ಯಾಂಡ್ ಗೆ ತೆರಳಿದರು.
ಶ್ವೇತಭವನದಲ್ಲಿ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಇಂದು ಕೊನೆಯ ದಿನವಾಗಿದೆ. ಮೇರಿಲ್ಯಾಂಡ್ ನಲ್ಲಿ ವಿದಾಯದ ಭಾಷಣ ಮಾಡಿದ ಡೊನಾಲ್ಡ್ ಟ್ರಂಪ್, ಮುಂದಿನ ಸರ್ಕಾರಕ್ಕೆ ಶುಭಕೋರಿ, ಅಮೆರಿಕ ಜನರ ಆಸೆಗಳನ್ನು ಈಡೇರಿಸಲಿ ಎಂದೂ ಹೇಳಿದ್ದಾರೆ.
ಈ ವೇಳೆ ಭಾವುಕರಾದ ಡೊನಾಲ್ಡ್ ಟ್ರಂಪ್, ಕ್ಯಾಪಿಟಲ್ ಹಿಲ್ ಮೇಲಿನ ದಾಳಿ ಹಾಗೂ ಚೀನಾದ ಕೊರೋನ ವೈರಸ್ ಹಾವಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಮೆರಿಕದ 45ನೇ ಅಧ್ಯಕ್ಷರಾಗಿ ಅನೇಕ ಅಭಿವೃದ್ಧಿ ಪರ ಕೆಲಸ ಮಾಡಿದ್ದೇನೆ, ಕೊರೋನಾ ನಿಯಂತ್ರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಆಮೆರಿಕದ ಆರ್ಥಿಕ ಸ್ಥಿತಿ ಸಹ ಉತ್ತಮವಾಗಿದೆ. ನಾನು ಸದಾ ಅಮೆರಿಕದ ಜನತೆಯ ಹಿತಕ್ಕಾಗಿ ಕೆಲಸ ಮಾಡಿದ್ದೇನೆ ಎಂದರು.
ಕೊನೆ ದಿನಗಳಲ್ಲಿ ಕ್ಯಾಪಿಟಲ್ ಮೇಲೆ ನಡೆದ ದಾಳಿಯಿಂದ ಅಮೆರಿಕನ್ನರು ಭಯಭೀತರಾಗಿದ್ದಾರೆ. ಅದನ್ನು ಎಂದಿಗೂ ಸಹಿಸಲಾಗದು ಎಂದೂ ಟ್ರಂಪ್ ಹೇಳಿರುವುದು ಅಚ್ಚರಿ ಬೆಳವಣಿಗೆಯಾಗಿದೆ.