ಕುಂಬಳೆ: ಯುವಜನ ಸಂಘಸಂಸ್ಥೆಗಳು ಸ್ಥಳೀಯ ಆಶೋತ್ತರಗಳಿಗೆ ಪ್ರತಿಬಿಂಬಗಳಾಗಿ ಕಾರ್ಯನಿರ್ವಹಿಸಿದಾಗ ಸಾಮಾಜಿಕ ವ್ಯವಸ್ಥೆ ಹಳಿಯಲ್ಲಿ ಸಂಚರಿಸಲು ಪೂರಕವಾಗುತ್ತದೆ. ಆಧನಿಕ ವ್ಯಾವಹಾರಿಕ ಜಗತ್ತಿನಲ್ಲಿ ಎಲ್ಲೆಲ್ಲೋ ಚದುರಿರುವ ಯುವ ಸಮೂಹ ದಶಕಗಳ ಹಿಂದಿನ ವಾತಾವರಣದಲ್ಲಿ ಇಲ್ಲದಿರುವುದು ಸತ್ಯವಾದರೂ ಸೀತಾಂಗೋಳಿಯಲ್ಲಿ ಯುವ ಸಮೂಹ ಸಮಷ್ಠಿಯಿಂದ ಕಾರ್ಯನಿರ್ವಹಿಸುತ್ತಿರುವುದು ಸ್ತುತ್ಯರ್ಹವಾದುದು ಎಂದು ಪುತ್ತಿಗೆ ಗ್ರಾ.ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ ತಿಳಿಸಿದರು.
ಸೀತಾಂಗೋಳಿಯ ಸಂತೋಷ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ನೇತೃತ್ವದಲ್ಲಿ ಸೀತಾಂಗೋಳಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಸ್ಮಾರಕ ಭವನವನ್ನು ಮಂಗಳವಾರ ಗಣರಾಜ್ಯೋತ್ಸವದ ವಿಶೇಷ ದಿನದಂದು ಸಮಾಜಕ್ಕೆ ಸಮರ್ಪಿಸಿ ಅವರು ಮಾತನಾಡಿದರು.
ದೇಶಸೇವೆಯ ಕರ್ತವ್ಯದಲ್ಲಿ ಪ್ರಾಣಾರ್ಪಣೆಗೈದ ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಅವರ ಸ್ಮರಣಾರ್ಥ ನಿರ್ಮಿಸಲಾಗಿರುವ ಭವನ ಕೇವಲ ಕಟ್ಟಡವಾಗಿರದೆ ಅಂತ:ಸತ್ವದಲ್ಲಿ ರಾಷ್ಟ್ರ ಪ್ರೇಮವನ್ನು ಬಡಿದೆಬ್ಬಿಸುವ ಶಕ್ತಿಕೇಂದ್ರವಾಗಿ ಮೂಡಿಬಂದಿದೆ. ಸ್ವಾರ್ಥದ ಇಂದಿನ ಜಗತ್ತಿನಲ್ಲಿ ತ್ಯಾಗ, ಬಲಿದಾನಗಳ ಮಹತ್ವಿಕೆಯ ಬೆಳಕು ಪ್ರವಹಿಸುವಲ್ಲಿ ಕ್ಲಬ್ ನ ಪದಾಧಿಕಾರಿಗಳು ಕೈಗೊಂಡ ಈ ಕಾಯಕ ಅಭಿನಂದನಾರ್ಹ ಎಂದು ಅವರು ಶ್ಲಾಘಿಸಿದರು.
ಕ್ಲಬ್ ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 43 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಸಂಘಟನೆ ಮೂರನೇ ತಲೆಮಾರಿನಲ್ಲೂ ಆರಂಭ ಕಾಲದ ಉತ್ಸಾಹವನ್ನೇ ಆವಾಹಿಸಿ ಮುಂದುವರಿಯುತ್ತಿರುವುದು ವಿಶೇಷತೆಯಾಗಿದೆ. ಧರ್ಮ, ರಾಜಕೀಯ, ಮೇಲು-ಕೀಳುಗಳ ಬೇಧಗಳಿಲ್ಲದೆ ಎಲ್ಲಾ ವರ್ಗದ ಯುವ ಮನಸ್ಸುಗಳು ಕ್ಲಬ್ ಮೂಲಕ ಸೀತಾಂಗೋಳಿ ಪ್ರದೇಶದಲ್ಲಿ ನಡೆಸುತ್ತಿರುವ ವಿವಿಧ ಆಯಾಮಗಳ ಕಾರ್ಯಚಟುವಟಿಕೆಗಳು, ಸಾಮಾಜಿಕ ಸೌಹಾರ್ಧತೆ ಎಲ್ಲೆಡೆಗೆ ಮಾದರಿಯಾಗಿರುವುದು ಕೃತಾರ್ಥತೆಯೊದಗಿಸಿದೆ. ಸಂದೀಪ್ ಉಣ್ಣಿಕೃಷ್ಣನ್ ಅವರ ಬಲಿದಾನವನ್ನು ಗುರುತಿಸಿ, ಅವರನ್ನೇ ತಮ್ಮ ಮಾದರಿ ವ್ಯಕ್ತಿಯಾಗಿ ಸಮಾಜೋನ್ನತಿಯ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಸಂಘಟನೆ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ಕøತ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಿದೆ ಎಂದರು.
ಉದ್ಯಮಿ, ಸಂಘಟಕ ಅಹಮ್ಮದ್ ಹಾಜಿ ಚೆರ್ಕಳ ಅವರು ಕಟ್ಟಡವನ್ನು ರಿಬ್ಬನ್ ಕತ್ತರಿಸಿ ಸಾಂಕೇತಿಕವಾಗಿ ಉದ್ಘಾಟಿಸಿದ ಸಮಾರಂಭದಲ್ಲಿ ಮಂಜೇಶ್ವರ ಗ್ರಾ.ಪಂ. ಅಧ್ಯಕ್ಷೆ ಜೀನ್ ಲವೀನೊ ಮೊಂತೇರೊ, ಪುತ್ತಿಗೆ ಗ್ರಾ.ಪಂ.ಸದಸ್ಯರಾದ ಕಾವ್ಯಶ್ರೀ, ಸುಕುಮಾರ ಕುದ್ರೆಪ್ಪಾಡಿ, ಜನಾರ್ದನ ಪೂಜಾರಿ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಸೀತಾಂಗೋಳಿ ಘಟಕಾಧ್ಯಕ್ಷ ನಸೀರ್, ಉದ್ಯಮಿ ಮೊಯ್ದೀನ್, ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಅವರ ಕುಟುಂಬದ ಪ್ರತಿನಿಧಿಯಾಗಿ ಆಗಮಿಸಿದ್ದ ಅನಂತಕೃಷ್ಣ ಭಟ್ ನೀರ್ಚಾಲು ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಅಪ್ಪಣ್ಣ ಸೀತಾಂಗೋಳಿ,ಪ್ರೊ.ಎ.ಶ್ರೀನಾಥ್, ಜಯಂತ ಪಾಟಾಳಿ ಸೀತಾಂಗೋಳಿ, ಯಕ್ಷಗಾನ ಕಲಾವಿದ ಸತ್ಯಾನಂದ ಪೇಜಾವರ ಉಪಸ್ಥಿತರಿದ್ದರು.
ಈ ಸಂದರ್ಭ ರೋಗಿಗಳ ಆರೈಕೆಯಲ್ಲಿ ವಿಶೇಷ ಸಾಧನೆಗೈಯ್ಯುತ್ತಿರುವ ಹಿರಿಯ ದಾದಿ ಲಿಸಿ ಡಿಸೋಜ, ಐವತ್ತಕ್ಕೂ ಹೆಚ್ಚುಬಾರಿ ರಕ್ದಾನಗೈದ ಜಯಪ್ರಕಾಶ್ ಅವರನ್ನು ವಿಶೇಷವಾಗಿ ಗೌರವಿಸಿ ಅಭಿನಂದಿಸಲಾಯಿತು. ಅಲ್ಲದೆ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನೂತವಾಗಿ ಆಯ್ಕೆಯಾಗಿರುವ ಜನಪ್ರತಿನಿಧಿಗಳಾದ ಸುಬ್ಬಣ್ಣ ಆಳ್ವ, ಜೀನ್ ಲವೀನೊ ಮೊಂತೇರೊ, ಸುಕುಮಾರ ಕುದ್ರೆಪ್ಪಾಡಿ, ಕಾವ್ಯಶ್ರೀ, ಜನಾರ್ದನ ಪೂಜಾರಿ, ಕ್ಲಬ್ ನ ಹಿರಿಯ ಸದಸ್ಯ ರವಿ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ಕ್ಲಬ್ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನಗೈದವರಿಗೆ ಬ್ಲಡ್ ಬ್ಯಾಂಕ್ ವತಿಯಿಂದ ನೀಡಲಾಗುವ ಪ್ರಮಾಣಪತ್ರಗಳನ್ನು ಈ ಸಂದರ್ಭ ವಿತರಿಸಲಾಯಿತು. ಮಾಲಿಂಗ ಕೆ. ಸ್ವಾಗತಿಸಿ, ರದೀಶ್ ವಂದಿಸಿದರು. ಗುರುಪ್ರಸಾದ್ ಸೀತಾಂಗೋಳಿ ಕಾರ್ಯಕ್ರಮ ನಿರೂಪಿಸಿದರು.