HEALTH TIPS

ಮತಗಟ್ಟೆಗೆ ತೆರಳದೇ ಹಕ್ಕು ಚಲಾವಣೆಗೆ ಅವಕಾಶ: ಅಣಕು ಪ್ರಯೋಗ ಶೀಘ್ರ ಆರಂಭ

       ನವದೆಹಲಿ: ಮತಗಟ್ಟೆಗೆ ತೆರಳದೇ ಮತ ಹಕ್ಕು ಚಲಾಯಿಸುವ (ರಿಮೋಟ್‌ ವೋಟಿಂಗ್) ಸೌಲಭ್ಯವನ್ನು ಕುರಿತಂತೆ ಅಣಕು ಪ್ರಯೋಗ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಹೇಳಿದ್ದಾರೆ.

          11ನೇ ರಾಷ್ಟ್ರೀಯ ಮತದಾರರ ದಿನ ನಿಮಿತ್ತ ನೀಡಿರುವ ಸಂದೇಶದಲ್ಲಿ ಅವರು, 'ಈ ಸಂಬಂಧ ತಂತ್ರಜ್ಞಾನದ ಬಳಕೆಗೆ ಸಂಬಂಧಿಸಿ ಅಧ್ಯಯನ ಯೋಜನೆ ಈಗಾಗಲೇ ಆರಂಭವಾಗಿದೆ. ಉತ್ತಮ ಪ್ರಗತಿ ಕಂಡುಬಂದಿದ್ದು, ಶೀಘ್ರವೇ ಅಣಕು ಪ್ರಯೋಗವೂ ನಡೆಯಲಿದೆ' ಎಂದಿದ್ದಾರೆ.

        ಅಲ್ಲದೆ, ಸಾಗರೋತ್ತರದಲ್ಲಿ ಇರುವ ಭಾರತೀಯ ಮತದಾರರಿಗೆ ಅಂಚೆ ಮತಪತ್ರ ಸೇವೆಯನ್ನು ಒದಗಿಸುವ ಪ್ರಸ್ತಾವ ಕಾನೂನು ಸಚಿವಾಲಯದ ಗಂಭೀರ ಪರಿಶೀಲನೆಯಲ್ಲಿದೆ ಎಂದು ಹೇಳಿದ್ದಾರೆ.

ಹೊಸ ತಂತ್ರಜ್ಞಾನದ ಬಳಕೆ ಕುರಿತು ಐಐಟಿ-ಮದ್ರಾಸ್‌ ಜೊತೆಗೆ ಆಯೋಗ ಒಡಂಬಡಿಕೆ ಮಾಡಿಕೊಂಡಿದೆ. ಈ ಸೌಲಭ್ಯದಡಿ ದೂರದ ಪ್ರದೇಶಗಳಲ್ಲಿ ಇರುವ ಮತದಾರರು ತಮ್ಮ ಕ್ಷೇತ್ರದ ನಿಯೋಜಿತ ಮತಗಟ್ಟೆಗೆ ತೆರಳದೆಯೇ ತಮ್ಮ ಮತ ಹಕ್ಕು ಚಲಾಯಿಸಬಹುದಾಗಿದೆ ಎಂದು ತಿಳಿಸಿದರು.

ಯೋಜನೆಗೆ ಬಳಸುತ್ತಿರುವ 'ಬ್ಲಾಕ್‌ಚೈನ್' ತಂತ್ರಜ್ಞಾನವನ್ನು ವಿವರಿಸಿದ ಮಾಜಿ ಹಿರಿಯ ಉಪ ಚುನಾವಣಾ ಆಯುಕ್ತ ಸಂದೀಪ್ ಸಕ್ಸೇನಾ ಅವರು, 'ಇಲ್ಲಿ ದ್ವಿಪಥ ಕಾರ್ಯ ನಿರ್ವಹಿಸುವ ವಿದ್ಯುನ್ಮಾನ ಮತಯಂತ್ರ ವ್ಯವಸ್ಥೆ ಬಳಕೆಯಾಗಲಿದೆ. ನಿಯೋಜಿತ ಇಂಟರ್‌ನೆಟ್‌ ಸಂಪರ್ಕದಲ್ಲಿ, ಗುರುತಿಸಲಾದ ಐ.ಪಿ ಪರಿಕರ, ಬಯೊಮೆಟ್ರಿಕ್ ಪರಿಕರ, ವೆಬ್‌ ಕ್ಯಾಮೆರಾಗಳು ಇದಕ್ಕಾಗಿ ಬಳಕೆಯಾಗಲಿವೆ ಎಂದು ತಿಳಿಸಿದರು.

        ಆದರೆ, ಮತದಾರರು ಪೂರ್ವನಿರ್ಧರಿತ ವೇಳೆಯಲ್ಲಿ ತಾವು ನೆಲೆಸಿರುವ ಪ್ರದೇಶದ ನಿಯೋಜಿತ ಸ್ಥಳಕ್ಕೆ ತೆರಳಿ ಈ ಸೌಲಭ್ಯ ಬಳಸಬಹುದು. ಈ ಸೇವೆಯ ಅರ್ಥ ಮನೆಯಲ್ಲಿದ್ದೇ ಮತ ಚಲಾಯಿಸಬಹುದು ಎಂದಲ್ಲ. ಹೊಸ ವ್ಯವಸ್ಥೆಯಲ್ಲಿ ಮತದಾರನ ಗುರುತುಪತ್ತೆ ಬಳಿಕ ಹಕ್ಕುಚಲಾವಣೆಗೆ ಇ-ಮತಪತ್ರ ಸಿದ್ಧವಾಗಲಿದೆ ಎಂದು ಸಕ್ಸೇನಾ ಸ್ಪಷ್ಟಪಡಿಸಿದರು.

        ಹೀಗೇ ಚಲಾವಣೆಯಾದ ಮತಗಳನ್ನು ತಿರುಚಲಾಗಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಲು ಮತ ಎಣಿಕೆಗೆ ಪೂರ್ವಭಾವಿಯಾಗಿ ಮತ್ತೊಮ್ಮೆ ಪರಿಶೀಲನೆ ನಡೆಯಲಿದೆ ಎಂದೂ ಅವರು ಹೇಳಿದರು.

ಇದಕ್ಕೆ ಉದಾಹರಣೆಯೊಂದನ್ನು ನೀಡಿದ ಸಕ್ಸೇನಾ, ಲೋಕಸಭೆ ಚುನಾವಣೆಯಲ್ಲಿ ಚೆನ್ನೈನ ಮತದಾರ ದೆಹಲಿಯಲ್ಲಿ ಇರುತ್ತಾನೆ ಎಂದು ಭಾವಿಸೋಣ. ತನ್ನ ಹಕ್ಕು ಚಲಾಯಿಸಲು ಆತ ಚೆನ್ನೈಗೇ ತೆರಳುವ ಬದಲು, ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ನಿಯೋಜಿತ ಸ್ಥಳಕ್ಕೆ ತೆರಳಿ ಆತ ತನ್ನ ಮತ ಚಲಾಯಿಸಬಹುದಾಗಿದೆ' ಎಂದು ಹೇಳಿದರು.

      ಈ ಸೌಲಭ್ಯ ಬಳಸಲು ಮತದಾರರು ಪೂರ್ವಭಾವಿಯಾಗಿ ಆಯಾ ಚುನಾವಣಾಧಿಕಾರಿಗೆ ಅರ್ಜಿ ಸಲ್ಲಿಸಿಬೇಕಾಗುತ್ತದೆ ಎಂದು ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries