ಕಾಸರಗೋಡು: ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಮಾನಸಿಕ, ದೈಹಿಕ ಸಮಸ್ಯೆ ಎದುರಿಸುತ್ತಿರುವವರ ವಿರುದ್ಧ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರ ತೋರುವ ದ್ರೋಹಕರ ನೀತಿ ಕೈಬಿಡುವಂತೆ ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಆಗ್ರಹಿಸಿದ್ದಾರೆ.
ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ತಿರುವನಂತಪುರ ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿರುವ ಶ್ರೀಸತ್ಯಸಾಯಿ ಅನಾಥಾಶ್ರಮ ಟ್ರಸ್ಟ್ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಿರ್ಮಿಸಿಕೊಟ್ಟಿರುವ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವಲ್ಲೂ ಸರ್ಕಾರ ರಾಜಕೀಯ ಲೆಕ್ಕಾಚಾರ ನಡೆಸುತ್ತಿದೆ. ಟ್ರಸ್ಟ್ ಮನೆಗಳ ನಿರ್ಮಾಣ ಪೂರ್ತಿಗೊಳಿಸಿದ್ದರೂ, ಮುರುಕಲು ಮನೆ ಹಾಗೂ ಬಾಡಿಗೆ ಕೊಠಡಿಗಳಲ್ಲಿ ಕಾಲ ಕಳೆಯುತ್ತಿರುವ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ಪಾಲಿಗೆ ಈ ಮನೆಗಳು ಮರೀಚಿಕೆಯಾಗಿದೆ. ಎಣ್ಮಕಜೆ ಹಾಗೂ ಪುಲ್ಲೂರ್ ಪೆರಿಯ ಪಂಚಾಯಿತಿಯಲ್ಲಿ ಒಂದುವರೆ ವರ್ಷದ ಹಿಂದೆ ಕೆಲಸ ಪೂರ್ತಿಗೊಂಡಿರುವ 59ಮನೆಗಳಿದ್ದರೂ ಇವುಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲು ಸರ್ಕಾರ ಮುಂದಾಗುತ್ತಿಲ್ಲ. ಪುಲ್ಲೂರ್ ಪೆರಿಯ ಪಂಚಾಯಿತಿಯ ಇರಿಯದಲ್ಲಿ ಟ್ರಸ್ಟ್ ನಿರ್ಮಿಸಿಕೊಟ್ಟಿರುವ ಮನೆಯನ್ನು ಎಂಡೋಸಂತ್ರಸ್ತ ಬಾಲಕಿಗೆ ನೀಡಲಾಗಿದ್ದು, ಇದನ್ನು ವಾಪಾಸ್ ಪಡೆಯಲು ತಂತ್ರ ನಡೆಯುತ್ತಿರುವುದಾಗಿ ಅವರು ಟೀಕಿಸಿದ್ದಾರೆ.