ತಿರುವನಂತಪುರ: ಮಿಜೋರಾಂ ಮಾಜಿ ಗವರ್ನರ್ ಕುಮ್ಮನಂ ರಾಜಶೇಖರನ್ ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಬಿಜೆಪಿ ಅನೌಪಚಾರಿಕ ಒಪ್ಪಂದಕ್ಕೆ ಬಂದಿದೆ. ಪಿ.ಕೆ. ಕೃಷ್ಣದಾಸ್ ಅವರನ್ನು ಕಾಟ್ಟಾಕಡದಲ್ಲೂ, ಎ.ಎನ್.ರಾಧಾಕೃಷ್ಣನ್ ಅವರನ್ನು ಮಣಲೂರಿನಲ್ಲಿಯೂ ಈಗಿಂದೀಗಲೇ ಕೆಲಸ ಪ್ರಾರಂಭಿಸುವಂತೆ ಕೇಳಿದೆ. ಕೆ. ಸುರೇಂದ್ರನ್ ಸ್ಪರ್ಧಿಸಲಿದ್ದಾರೆ. ಆದರೆ ಕ್ಷೇತ್ರವನ್ನು ನಿರ್ಧರಿಸಲಾಗಿಲ್ಲ.
ಬಿಜೆಪಿಯ ಮಾಜಿ ರಾಜ್ಯ ಅಧ್ಯಕ್ಷ ಮತ್ತು ಹಿರಿಯ ನಾಯಕ ಕುಮ್ಮನಂ ರಾಜಶೇಖರ ಅವರು ವಿಧಾನಸಭೆ ಸ್ಪರ್ಧಾ ಕಣದಿಂದ ಹೊರಗುಳಿಯಬಾರದೆಂಬ ನಿರ್ಧಾರದಂತೆ ನೇಮಂ ನಿಂದ ಸ್ಪರ್ಧಿಸುವಂತೆ ಸೂಚಿಸಲಾಗಿದೆ ಎನ್ನಲಾಗುತ್ತಿದೆ. ಮಾಜಿ ರಾಜ್ಯ ಅಧ್ಯಕ್ಷ ಪಿ.ಕೆ. ಕೃಷ್ಣದಾಸ್ ಅವರನ್ನು ಕಾಟ್ಟಾಕಡ ಮತ್ತು ಉಪಾಧ್ಯಕ್ಷ ಎ.ಎನ್. ರಾಧಾಕೃಷ್ಣನ್ ಮಣಲೂರಿನಲ್ಲಿಯೂ ಸ್ಪರ್ಧಿಸುವ ಸಾಧ್ಯತೆ ಇದ್ದು, ಆ ಕ್ಷೇತ್ರಗಳತ್ತ ತೆರಳಿ ಕೆಲಸ ಪ್ರಾರಂಭಿಸಲು ಅವರಿಗೆ ಪಕ್ಷ ಸೂಚಿಸಿದೆ ಎಂದು ತಿಳಿದುಬಂದಿದೆ.
ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ಕೋಝಿಕ್ಕೋಡ್ ನಾರ್ತ್ ನಲ್ಲಿ ಸ್ಪರ್ಧಿಸಬಹುದು. ರಾಜ್ಯ ಅಧ್ಯಕ್ಷ ಸುರೇಂದ್ರನ್ ಎಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಕಳಕ್ಕೂಟ್ಟಂ ಅಥವಾ ಕೊನ್ನಿ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುವುದು. ಕಳೆದ ಬಾರಿ 84 ಮತಗಳಿಂದ ಸೋತ ಮಂಜೇಶ್ವರದಿಂದಲೂ ಅವರನ್ನು ಪರಿಗಣಿಸಬಹುದು ಎನ್ನಲಾಗುತ್ತಿದೆ. ಮುರಲೀಧರನ್ ರಾಜ್ಯ ರಾಜಕೀಯಕ್ಕೆ ಮರಳಬಾರದು ಎಂಬುದು ಇಲ್ಲಿಯವರೆಗಿನ ಕೇಂದ್ರದ ನಿಲುವು. ವಿ.ವಿ. ರಾಜೇಶ್ ವಟ್ಟಿಯೂರ್ಕಾವು ಅಥವಾ ನೆಡುಮಾಂಗಾಡಿನಲ್ಲಿ ಸ್ಪರ್ಧಿಸುವ ಸಾಧ್ಯತೆ ಕೇಳಿಬಂದಿದೆ.
ರಾಜ್ಯ ಕಾರ್ಯದರ್ಶಿ ಸುರೇಶ್ ಅವರು ಕೋವಳಂ ಅಥವಾ ತಿರುವನಂತಪುರದಲ್ಲಿ ಸ್ಪರ್ಧಿಸಲಿದ್ದಾರೆ. ಶುಕ್ರವಾರ ರಾತ್ರಿ 10 ಗಂಟೆಗೆ ಅನೌಪಚಾರಿಕ ಸಭೆಯ ನಂತರ ರಾಜ್ಯ ಸಮಿತಿ ಶನಿವಾರ ಬೆಳಿಗ್ಗೆ 11 ಗಂಟೆಗೆ ತ್ರಿಶೂರ್ ನಲ್ಲಿ ಸಭೆ ಸೇರಬೇಕಿತ್ತು. ಆದರೆ ಕೋವಿಡ್ ಸೋಂಕು ಬಾಧಿತರಾದ ಸುರೇಂದ್ರನ್ ಸಭೆಗೆ ಬಾರಲಾಗದ ಹಿನ್ನೆಲೆಯಲ್ಲಿ ಮುಂದೂಡಲಾಯಿತು. ವಿಧಾನಸಭಾ ಚುನಾವಣೆಯ ಮೊದಲ ಪಟ್ಟಿಯನ್ನು ಮುಂದಿನ ತಿಂಗಳ ಮೊದಲ ವಾರದಲ್ಲಿ ರಚಿಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ.